ಕುಂದಾಪುರ: ಕರಿಮಣಿ ಕಳವು ಪ್ರಕರಣ- ಮಹಿಳೆಯರಿಬ್ಬರ ಬಂಧನ
ಕುಂದಾಪುರ, ಜ.19: ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ನಡೆದ ಕರಿಮಣಿ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಬೆಂಡಗೇರಿ ಮೂಲದ ಬೀಬಿ ಜಾನ್(58) ಹಾಗೂ ಪಾರವ್ವ(54) ಬಂಧಿತ ಆರೋಪಿಗಳು. ಮಹಿಳೆಯೊಬ್ಬರು ಮದುವೆ ನಿಮಿತ್ತ ಖರೀದಿಸಿ ತಂದ ಕರಿಮಣಿ ಸರವನ್ನು ಬ್ಯಾಗಿನಲ್ಲಿಟ್ಟು ಡಿ.27ರಂದು ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಪೂಜೆಗೆ ಹೋಗಿದ್ದ ವೇಳೆ ಕಳ್ಳರು ಚಿನ್ನಾಣಭರಣವಿದ್ದ ಪರ್ಸ್ ಕಳವುಗೈದಿದ್ದು, ಈ ಬಗ್ಗೆ ಜ.14ರಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರ ತಂಡವು ಸಿಸಿಟಿವಿ ಮತ್ತು ಇತರ ತಾಂತ್ರಿಕ ದಾಖಲೆ ವಿಶ್ಲೇಷಿಸಿ, ಪ್ರಕರಣ ದಾಖಲಾದ ಮೂರೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕಳವುಗೈದ 3.5 ಲಕ್ಷ ಮೌಲ್ಯದ 51.900 ಗ್ರಾಂ ತೂಕದ ಚಿನ್ನದ ಕರಿಮಣಿಯನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.