ಪಡುಬಿದ್ರೆ: ಸೈಬರ್ ಕ್ರೈಮ್ ಅಧಿಕಾರಿಗಳ ಹೆಸರಿನಲ್ಲಿ 15.62 ಲಕ್ಷ ರೂ. ವಂಚನೆ

ಪಡುಬಿದ್ರೆ: ಕೋರಿಯರ್‌ನಲ್ಲಿ ಡ್ರಗ್ಸ್ ಕಳುಹಿಸಲಾಗುತ್ತಿದೆ ಎಂದು ಹೆದರಿಸಿ ಸೈಬರ್ ಕ್ರೈಮ್ ಅಧಿಕಾರಿಗಳೆಂದ ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡು ಮೂಲದ ಪಡುಬಿದ್ರಿ ನಿವಾಸಿ ಟಿಯಾಗು (32) ಎಂಬವರಿಗೆ ಜ.17ರಂದು ಫೆಡ್‌ಎಕ್ಸ್ ಕೊರಿಯರ್ ಎಂಬ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ವ್ಯಕ್ತಿಯೊಬ್ಬ ಮಾತನಾಡಿದ್ದು, ನೀವು ಮುಂಬೈನಿಂದ ಇರಾನ್‌ಗೆ ಮಾಡಿದ ಕೊರಿಯರ್ ಡೆಲಿವರಿ ಆಗಲಿಲ್ಲ ಎಂದು ತಿಳಿಸಿದ್ದನು. ನಾವು ಯಾವುದೇ ಕೊರಿಯರ್ ಆರ್ಡರ್ ಮಾಡಿಲ್ಲ ಎಂದು ಹೇಳಿದ ಟಿಯಾಗು, ಅದರಲ್ಲಿ ಏನಿದೆ ಎಂದು ವಿಚಾರಿಸಿದರು.

ಆಗ ಆ ವ್ಯಕ್ತಿಯು, ಪಾರ್ಸೆಲ್‌ನಲ್ಲಿ ಅವಧಿ ಮುಗಿದ ಪಾಸ್‌ಪೋರ್ಟ್, ಕ್ರೆಡಿಟ್ ಕಾರ್ಡ್, ಟಾಯ್, ಎಂಬಿಡಿಎ 450ಗ್ರಾಂ ಇದೆ ಎಂದು ಹೇಳಿ, ನಿಮ್ಮ ಐಡಿ ದುರುಪಯೋಗ ಆಗಿದ್ದು, ಪಾರ್ಸೆಲ್‌ನಲ್ಲಿ ಎಂಬಿಡಿಎ ಡ್ರಗ್‌ನ್ನು ಅಕ್ರಮವಾಗಿ ಕಳುಹಿಸಲಾಗುತ್ತಿದೆ ಎಂದು ತಿಳಿಸಿದನು. ನೀವು ಸಿಕ್ಕಿಬಿದ್ದರೆ ನಿಮಗೆ ಜೀವನ ಪರ್ಯಂತ ಕೇಸು ದಾಖಲಾಗುತ್ತದೆ ಎಂದು ಹೇಳಿ, ದೂರು ಕೊಡಲು ಮುಂಬೈ ಸೈಬರ್ ಕ್ರೈಂ ಬ್ರಾಂಚ್ ಗೆ ಕರೆಯನ್ನು ವರ್ಗಾವಣೆ ಮಾಡುತ್ತೇನೆ ಎಂದು ಹೇಳಿದನು.

ಒಂದು ನಿಮಿಷದ ನಂತರ ಇನ್ನೊರ್ವ ವ್ಯಕ್ತಿ ಮಾತನಾಡಿ ನಿಮ್ಮ ಅಕೌಂಟ್ ಚೆಕ್ ಮಾಡಬೇಕಾಗಿದೆ ಎಂದು ಹೇಳಿ ಟಿಯಾಗು ಅವರನ್ನು ನಂಬಿಸಿ, ಟಿಯಾಗು ಅವರ ಐಸಿಐಸಿಐ ಅಪ್ಲಿಕೇಶನ್‌ನಲ್ಲಿರುವ 15,62,921ರೂ. ಮೊತ್ತದ ಪರ್ಸನಲ್ ಲೋನ್‌ಗೆ ಕ್ಲಿಕ್ ಮಾಡಿಸಿದನು. ಆಗ ಬಂದ ಒಟಿಪಿಯನ್ನು ಪಡೆದಾಗ ಲೋನ್ ಹಣವು ಟಿಯಾಗು ಅವರ ಬ್ಯಾಂಕ್ ಖಾತೆಗೆ ಜಮಾ ಆಯಿತು. ನಂತರ ಆ ವ್ಯಕ್ತಿಯು ಸೈಬರ್ ಕ್ರೈಮ್ ಎಂದು ನಂಬಿಸಿ ಅಕೌಂಟ್ ನಂಬರ್ ನೀಡಿ ಟಿಯಾಗು ಖಾತೆಯಲ್ಲಿದ್ದ 15,62,921ರೂ. ಮೊತ್ತವನ್ನು ಆರ್.ಟಿ.ಜಿ.ಎಸ್. ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!