‘ಸಿದ್ದರಾಮಯ್ಯನವರೇ ಸಂಸ್ಕೃತಿ, ಸಭ್ಯತೆ ಬಗ್ಗೆ ಮಾತನಾಡುವುದಾದರೆ ನನ್ನ ಎದುರು ಬಂದು ಮಾತಾಡಿ’- ಅನಂತ್ ಕುಮಾರ್ ಹೆಗಡೆ
ಶಿರಸಿ: ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವಿವ ವಾದ-ವಿವಾದ ಹೆಚ್ಚಾಗುತ್ತಿದೆ. ನನ್ನ ಮಾತನ್ನು ವಿರೋಧಿಸುವವರು ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಅವರಿಗೆ ಸಭ್ಯತೆ ಅಂದರೆ ಏನು ಎಂದು ನಾನು ಪಾಠ ಮಾಡುತ್ತೇನೆ. ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಏನೂ ಮಾತನಾಡಬೇಕು ಅಂತ ನಾನು ಹೇಳುತ್ತೇನೆ. ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತಾಡಬೇಕು ಹಾಗೆ ಮಾತಾಡಬೇಕು. ಸಭ್ಯತೆ ಅಂದರೆ ಏನು ಎಂಬುವುದನ್ನು ಮೊದಲು ಕಾಂಗ್ರೆಸ್ ನವರು ತಿಳಿದುಕೊಳ್ಳಲಿ ಎಂದು ಸಂಸದ ಅನಂತ ಕುಮಾರ್ ಹೆಗಡೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರಿಗೆ ಏಕವಚನದಲ್ಲಿ ಮಾಸ್ ಮರ್ಡರ್ ಎಂದು ಕರೆದರು. ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ..? ಯಾರಿಗೆ ಹೇಗೆ ಮಾತಾಡಬೇಕು ನಮಗೆ ಗೊತ್ತು. ಬೇಕಿದ್ದರೆ ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೊ ಕೂತುಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತಾವು ಏಕವಚನ ಪ್ರಯೋಗ ಮಾಡಿರುವ ವಿಚಾರವಾಗಿ ಉಂಟಾಗಿರುವ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆಯನ್ನ ಖಂಡಿಸುವುದು ಸಹಜ. ಇದು ನನ್ನ ಹೇಳಿಕೆ ಇದು ಪಕ್ಷದ ಹೇಳಿಕೆ ಅಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪ್ರಧಾನಿ ಮೋದಿಯವರ ಮತ್ತು ನಮ್ಮ ದೇವಸ್ಥಾನಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸಭ್ಯವಾಗಿ ಮೊದಲು ಮಾತನಾಡಿದ್ದಾರೆ. ನಮ್ಮ ದೇವಸ್ಥಾನದ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು ಯಾಕೆ ಬೇಕಿತ್ತು, ನಮ್ಮ ಪ್ರಧಾನಿ ಮೋದಿ, ಅಮಿತ ಶಾ ಬಗ್ಗೆ ಯಾರೆಲ್ಲ ಏನು ಏನು ಮಾತನಾಡಿದ್ದಾರೆ ಹೇಳಬೇಕಾ ಎಂದು ಕೇಳಿದರು.
ಜಾತ್ಯತೀತತೆಯಲ್ಲಿ ನಮಗೂ ನಂಬಿಕೆಯಿದೆ, ಆದರೆ ಕಾಂಗ್ರೆಸ್ ನ ಕೆಲವು ನಾಯಕರು ಮೊದಲು ಸಮಾಜಕ್ಕೆ, ಜನರಿಗೆ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಲಿ, ಆದರೆ ನಿಮ್ಮ ಧ್ವನಿ, ಭಾಷೆಯಲ್ಲಿ ಇರಲಿ, ಹಿಂದೂಗಳಿಗೆ, ಮುಸ್ಲಿಮರಿಗೆ ಒಂದು ಪದ್ಧತಿ ಯಾವ ನ್ಯಾಯ ಹೇಳಿ, ಆಮೇಲೆ ನಮಗೆ ಪಾಠ ಮಾಡಲು ಬನ್ನಿ, ಯಾರು ನನ್ನ ಮಾತನ್ನು ಒಪ್ಪಿಕೊಳ್ಳುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ, ನನ್ನ ಮಾತನ್ನು ದೇವರು ಒಪ್ಪಿಕೊಳ್ಳುತ್ತಾರೆ, ಹಿಂದೂ ಸಮಾಜದ ಸಭ್ಯ ಜನ ಒಪ್ಪಿಕೊಳ್ಳುತ್ತಾರೆ ಎಂದರು.