ಉಡುಪಿ: ಸಂಭ್ರಮದ ಮೂರು ತೇರು ಉತ್ಸವ ಸಂಪನ್ನ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆದಿರುವ ಸಪ್ತೋತ್ಸವದ ಆರನೇ ದಿನವಾದ ರವಿವಾರ ರಾತ್ರಿ ಮಕರ ಸಂಕ್ರಾಂತಿಯ ಅಂಗವಾಗಿ ಪರ್ಯಾಯ ಕೃಷ್ಣಾಪುರ ಮಠಾಧೀಶರ ನೇತೃತ್ವದಲ್ಲಿ ಆಕರ್ಷಕ ಮೂರು ತೇರು ಉತ್ಸವ ನಡೆಯಿತು.

ಇದಕ್ಕೆ ಮುನ್ನ ರಂಗುರಂಗಿನ ವಿದ್ಯುದ್ದೀಪಗಳಿಂದ ಅಲಂಕೃತ ಮಧ್ವ ಸರೋವರದಲ್ಲಿ ಶ್ರೀಕೃಷ್ಣ -ಮುಖ್ಯಪ್ರಾಣರಿಗೆ ತೆಪ್ಪೋತ್ಸವವೂ ನಡೆಯಿತು.

ಮೂರು ತೇರು ಉತ್ಸವದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಶಿರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.

ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ದಿನವೆಂದು ಹೇಳಲಾದ ಮಕರಸಂಕ್ರಮಣದಂದು ರಾತ್ರಿ ರಥಬೀದಿಯಲ್ಲಿ ಮೂರು ತೇರು ಉತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯುವುದು ಸಂಪ್ರದಾಯವಾಗಿದೆ. ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರನ್ನು ತಂದು ರಥಗಳಲ್ಲಿ ಕುಳ್ಳಿರಿಸಲಾಯಿತು.

ಮಕರ ಸಂಕ್ರಾಂತಿಯ ದಿನದಂದು ಮೊದಲ ಬಾರಿ ಉತ್ಸವದಲ್ಲಿ ಪಾಲ್ಗೊಳ್ಳುವ ಬ್ರಹ್ಮರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು, ಚಿಕ್ಕ ರಥದಲ್ಲಿ ಮುಖ್ಯಪ್ರಾಣನ ಉತ್ಸವ ಮೂರ್ತಿಯನ್ನು ಹಾಗೂ ಗರುಡ ರಥದಲ್ಲಿ ಶ್ರೀಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಮೂರ್ತಿಯನ್ನಿರಿಸಿ ರಥಬೀದಿಗೆ ಒಂದು ಸುತ್ತು ಬರಲಾಯಿತು.

ಭಕ್ತರಿಂದ ಎಳೆಯಲ್ಪಟ್ಟ ಮೂರು ರಥಗಳು ರಥಬೀದಿಯ ದಕ್ಷಿಣ ಭಾಗದಲ್ಲಿ ಪುತ್ತಿಗೆ ಮಠದ ಎದುರು ಒಂದು ಸರಳರೇಖೆಯಲ್ಲಿ ನಿಂತಾಗ ನೆರೆದ ಸಾವಿರಾರು ಮಂದಿ ಭಕ್ತರು ಜಯಘೋಷ ಮಾಡಿದರು. ಈ ಮೂರು ರಥಗಳ ಮುಂದೆ ವರ್ಣವೈವಿಧ್ಯದ ಸುಡುಮದ್ದುಗಳನ್ನು ಸಿಡಿಸಲಾಯಿತು.

ಸೋಮವಾರ ಚುರ್ಣೋತ್ಸವ: ಆಚಾರ್ಯ ಮಧ್ವರು 13ನೇ ಶತಮಾನದಲ್ಲಿ ಇದೇ ಮಕರ ಸಂಕ್ರಾಂತಿ ದಿನದಂದು ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದ ನೆನೆಪಿಗಾಗಿ ವಾರ್ಷಿಕ ಸಪ್ತೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ನಾಳೆ ಬೆಳಗ್ಗೆ 9:30ಕ್ಕೆ ಹಗಲು ರಥೋತ್ಸವ ಹಾಗೂ ಚೂರ್ಣೋತ್ಸವದೊಂದಿಗೆ ಒಂದು ವಾರದ ಸಪ್ತೋತ್ಸವ ಮುಕ್ತಾಯ ಗೊಳ್ಳಲಿದೆ. ನಾಳೆ ಸುವರ್ಣೋತ್ಸವ, ಅವಭೃತ ಸ್ನಾನದೊಂದಿಗೆ ಮಹಾ ಅನ್ನಸಂತರ್ಪಣೆಯೂ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!