ಸಚಿವೆ ಶೋಭಾ ಕರಂದ್ಲಾಜೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ-ಸಂಸದ ಜಿ.ಎಸ್. ಬಸವರಾಜು

ತುಮಕೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಸಂಸದ ಜಿ.ಎಸ್.ಬಸವರಾಜು ಹೊಸ ಹೆಸರು ತೇಲಿ ಬಿಟ್ಟಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಟಿಕೆಟ್ ನೀಡಿದರೆ ಫಲಿತಾಂಶದ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.

‘ವಿಧಾನಸಭಾ ಚುನಾವಣೆಯಲ್ಲಿ ಮಾಧುಸ್ವಾಮಿ ಸೋತಿದ್ದಾರೆ. ದುರಹಂಕಾರದವರಿಗೆ ಜನ ಮತ ಹಾಕುವುದಿಲ್ಲ. ಹೈಕಮಾಂಡ್ ನಾಯಕರು ಜನಾಭಿಪ್ರಾಯ ನೋಡಿಕೊಂಡು ಅಭ್ಯರ್ಥಿಯನ್ನು ಘೋಷಿಸುತ್ತಾರೆ. ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇವೆ’ ಎಂದರು.

ಮಾಜಿ ಸಚಿವ ವಿ.ಸೋಮಣ್ಣ ತುಮಕೂರಿನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಲ್ಲಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲಬಹುದು ಎಂದು ಸೋಮಣ್ಣ ಅವರಿಗೆ ಹೇಳಿದ್ದೇನೆ. ಮುಂದಿನ ಅಧಿವೇಶನ ಸಮಯದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಯ ನೀಡಿದ್ದಾರೆ. ಆಗ ಎಲ್ಲ ವಿಷಯಗಳನ್ನು ಅವರ ಗಮನಕ್ಕೆ ತರುತ್ತೇನೆ. ವಾಸ್ತವ ಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಲೋಕಸಭಾ ಸ್ಪರ್ಧೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ರವಿಶಂಕರ್, ಮುಖಂಡ ಎಸ್.ಪಿ. ಚಿದಾನಂದ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಕತ್ತೆ ನಿಲ್ಲಿಸಿದರೂ ಪ್ರಧಾನಿ ಮೋದಿ ಮುಖ ನೋಡಿಕೊಂಡು ಜನ ಬಿಜೆಪಿಗೆ ಮತ ನೀಡುತ್ತಾರೆ ಎಂದು ಬಸವರಾಜು ಹೇಳಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಅವರದ್ದೇ ಆದ ಶಕ್ತಿಯಿದೆ. ಅವರು ಚಾಣಾಕ್ಷರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲೂ ದೇವೇಗೌಡರ ವಿರುದ್ಧ ನಾನು ವೈಯಕ್ತಿಕವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆಗೆ ಅಪಸ್ವರ ಚಿಕ್ಕನಾಯಕನಹಳ್ಳಿ: ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆಗೆ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯ ಬಿ.ಎಸ್. ನಾರಾಯಣಗೌಡ ವಿರೋಧಿಸಿದ್ದಾರೆ. ‘ಮುದ್ದಹನುಮೇ ಗೌಡ ಅನುಕೂಲಸಿಂಧು ಅಲೆಮಾರಿ ರಾಜಕಾರಣಿ ಎನ್ನುವುದು ಅವರ ರಾಜಕೀಯ ನಡೆಯಿಂದ ಗೊತ್ತಾಗಿದೆ. ಸ್ವಾರ್ಥಕ್ಕಾಗಿ ಯಾವುದೇ ಪಕ್ಷಕ್ಕೆ ಜಿಗಿಯಬಲ್ಲರು. ಅಂಥವರು ಕೇವಲ ಟಿಕೆಟ್‌ಗಾಗಿ ಪಕ್ಷಕ್ಕೆ ಬರುವುದು ಸರಿಯಲ್ಲ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಗೌಡರು ಯಾವುದೇ ಫಲಾಪೇಕ್ಷೆ ಇಲ್ಲದೆ ಪಕ್ಷಕ್ಕೆ ಬರುವುದಾದರೆ ಬರಲಿ. ಈ ಕುರಿತು ಅವರು ಮುಚ್ಚಳಿಕೆ ಬರೆದುಕೊಡಲಿ’ ಎಂದು ಹೇಳಿದರು. ‘ಮುದ್ದಹನುಮೇಗೌಡರಿಗೆ ಪಕ್ಷ ಜಿಲ್ಲಾ ಪಂಚಾಯಿತಿ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿತ್ತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆನಂತರವೂ ಪಕ್ಷ ತೊರೆದಿದ್ದ ಅವರನ್ನು ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳುವುದಕ್ಕೆ ಜಿಲ್ಲಾ ಕಾಂಗ್ರೆಸ್ ವಿರೋಧ ಇದೆ ಎಂದರು.

Leave a Reply

Your email address will not be published. Required fields are marked *

error: Content is protected !!