ರಾಮನ ಮೇಲೆ ನಂಬಿಕೆ ಇರುವವರು ಯಾವುದೇ ದಿನ ಅಯೋಧ್ಯೆಗೆ ಭೇಟಿ ನೀಡಬಹುದು: ಖರ್ಗೆ

ನವದೆಹಲಿ: ರಾಮನ ಮೇಲೆ ನಂಬಿಕೆ ಇರುವವರು ಯಾವುದೇ ದಿನ ಅಯೋಧ್ಯೆ ದೇವಸ್ಥಾನಕ್ಕೆ ಭೇಟಿ ನೀಡಬಹುದು ಎಂದು ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಜನವರಿ 22ರ ರಾಮ ಮಂದಿರ ಉದ್ಘಾಟನಾ ಸಮಾರಂಭದ ಆಹ್ವಾನ ತಿರಸ್ಕರಿಸಿರುವುದಕ್ಕೆ ಬಿಜೆಪಿ “ಪಿತೂರಿ”ಯ ಭಾಗವಾಗಿ ತಮ್ಮ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಎಂದಿಗೂ ಯಾವುದೇ ಧರ್ಮ ಅಥವಾ ಗುರುಗಳನ್ನು ನೋಯಿಸಿಲ್ಲ. ಬಿಜೆಪಿ ದಿಕ್ಕು ತಪ್ಪಿಸುವ ತಂತ್ರಕ್ಕೆ ನಾವು ಜಗ್ಗುವುದಿಲ್ಲ ಮತ್ತು ಹಣದುಬ್ಬರ ಹಾಗೂ ನಿರುದ್ಯೋಗದಂತಹ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

ಜನವರಿ 22 ರಂದು ನಡೆಯಲಿರುವ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ಖರ್ಗೆ ಮತ್ತು ಕಾಂಗ್ರೆಸ್‌ನ ಉನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರು “ಗೌರವಯುತವಾಗಿ ತಿರಸ್ಕರಿಸಿದ್ದಾರೆ”. ಬಿಜೆಪಿ ಮತ್ತು ಆರ್‌ಎಸ್‌ಎಸ್ ಚುನಾವಣಾ ಲಾಭಕ್ಕಾಗಿ ರಾಮ ಮಂದಿರದಲ್ಲೂ “ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಈ ನಿರ್ಧಾರವನ್ನು ಟೀಕಿಸುತ್ತಿರುವ ಬಿಜೆಪಿ, ಕಾಂಗ್ರೆಸ್ “ಭಗವಾನ್ ರಾಮನ ವಿರೋಧಿ” ಎಂದು ಕರೆದಿದೆ. ಬಿಜೆಪಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ರಾಮನ ಮೇಲೆ ನಂಬಿಕೆ ಇರುವವರು ನಾಳೆ ಅಥವಾ ನಾಡಿದ್ದು ಅಯೋಧ್ಯೆಗೆ ಹೋಗಬಹುದು ಎಂದು ಜನವರಿ 6ರಂದೇ ಸ್ಪಷ್ಟಪಡಿಸಿದ್ದೇನೆ. ನಮ್ಮ ವಿರುದ್ಧ ಮಾತನಾಡುವುದು ಸರಿಯಲ್ಲ. ನಮ್ಮ ವಿರುದ್ಧ ವಾಗ್ದಾಳಿ ಮಾಡುವುದು ಬಿಜೆಪಿಯ ಪಿತೂರಿಯಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!