4 ವರ್ಷದ ಮಗು ಹತ್ಯೆ ಪ್ರಕರಣ: ವಿಚ್ಛೇದಿತ ಪತಿಯಿಂದ ತಿಂಗಳಿಗೆ 2.5 ಲಕ್ಷ ನಿರ್ವಹಣೆ ಪರಿಹಾರ ಕೇಳಿದ್ದ ಸಿಇಒ ಸುಚನಾ ಸೇಠ್!

ಬೆಂಗಳೂರು: ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಸಿಇಒ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಗೋವಾ ಪೊಲೀಸರಿಗೆ ಹಲವು ವಿಷಯಗಳು ಹೊರಬರುತ್ತಿವೆ.

ಗೋವಾದ ಅಪಾರ್ಟ್‌ಮೆಂಟ್‌ನಲ್ಲಿ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿವೆ, ಮಗುವನ್ನು ಹತ್ಯೆ ಮಾಡಲು ಮೊದಲೇ ಸುಚನಾ ಸೇಠ್ ಯೋಜನೆ ರೂಪಿಸಿಕೊಂಡಿದ್ದು, ಮಗುವಿಗೆ ಔಷಧಿಯ ಹೆಚ್ಚಿನ ಡೋಸ್ ನೀಡಿರಬಹುದು ಎಂದು ಹೇಳಲಾಗುತ್ತಿದೆ. ಆಕೆಯ ಮಾನಸಿಕ ಸ್ಥಿತಿಯನ್ನು ನಿರ್ಣಯಿಸಲು ಮತ್ತು ಘೋರ ಅಪರಾಧದ ಉದ್ದೇಶವನ್ನು ಕಂಡುಹಿಡಿಯಲು ಸಹಾಯ ಮಾಡಲು ಸುಚನಾಳನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ನಾಲ್ಕು ವರ್ಷದ ಮಗುವನ್ನು ಬಟ್ಟೆಯಿಂದ ಅಥವಾ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಮಹಿಳೆ ಸುಚನಾ ಸೇಠ್ (39) ಸೋಮವಾರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಮಗನನ್ನು ಕೊಂದು ಶವವನ್ನು ಬ್ಯಾಗ್‌ನಲ್ಲಿ ತುಂಬಿ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಯಲ್ಲಿದ್ದಳು. ಸೋಮವಾರ ರಾತ್ರಿ ಚಿತ್ರದುರ್ಗದಿಂದ ಆಕೆಯನ್ನು ಬಂಧಿಸಿ ಮಂಗಳವಾರ ಗೋವಾಕ್ಕೆ ಕರೆತರಲಾಗಿತ್ತು.

ಪೊಲೀಸ್ ಮೂಲಗಳ ಪ್ರಕಾರ, ಸುಚನಾ ಸೇಠ್ ವಿಚಾರಣೆಯ ಸಮಯದಲ್ಲಿ ತಾನು ಅಪರಾಧದಲ್ಲಿ ಭಾಗಿಯಾಗಿರು ವುದನ್ನು ನಿರಾಕರಿಸಿದ್ದು, ಮಗು ನಿದ್ರೆಯಿಂದ ಎದ್ದಾಗ ಸಹಜವಾಗಿಯೇ ಸತ್ತುಹೋಗಿತ್ತು ಎಂದು ಹೇಳಿದ್ದಾಳೆ. ಪೊಲೀಸರು ಸುಚನಾಳನ್ನು ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪದಲ್ಲಿ ಪಣಜಿ ಬಳಿಯ ಮನೋವೈದ್ಯಶಾಸ್ತ್ರ ಮತ್ತು ಮಾನವ ನಡವಳಿಕೆಯ ಸಂಸ್ಥೆಗೆ ಕರೆದೊಯ್ದು ಮಾನಸಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. “ನಾವು ವರದಿಗಾಗಿ ಕಾಯುತ್ತಿದ್ದೇವೆ. ತಪಾಸಣೆಯು ನಿಯಮಿತ ಪ್ರೋಟೋಕಾಲ್‌ನ ಒಂದು ಭಾಗವಾಗಿದೆ, ಅದು ಆರೋಪಿಯ ಬಂಧನದ ನಂತರ ಅನುಸರಿಸುತ್ತದೆ” ಎಂದು ಅಧಿಕಾರಿ ಹೇಳಿದರು.

ರಾಜ್ಯ ಪೊಲೀಸರು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಾವಂತ್, ಪೊಲೀಸ್ ವರಿಷ್ಠಾಧಿಕಾರಿ (ಉತ್ತರ ಗೋವಾ) ನಿಧಿನ್ ವಲ್ಸನ್ ನೇತೃತ್ವದ ತಂಡವು ಪ್ರಕರಣವನ್ನು ಸೂಕ್ಷ್ಮವಾಗಿ ವಿಚಾರಣೆ ಮಾಡುತ್ತಿದೆ. ಆರೋಪಿಯನ್ನು ಬಂಧಿಸಲಾಗಿದೆ. ನಾವು ಪ್ರಕರಣವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು. 

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್‌ನ ಮುಖ್ಯಸ್ಥರಾಗಿರುವ ಸೇಥ್, ಜನವರಿ 6 ರಂದು ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಚೆಕ್ ಇನ್ ಆಗಿ ಜನವರಿ 8 ರವರೆಗೆ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಹೊರಡುವ ಮೊದಲು ಅಲ್ಲಿಯೇ ಇದ್ದರು. ಆಕೆಯ ಬಂಧನದ ನಂತರ, ಮಂಗಳವಾರ ಪಣಜಿ ಬಳಿಯ ಮಾಪುಸಾ ಪಟ್ಟಣದ ನ್ಯಾಯಾಲಯವು ಆಕೆಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪತಿಯಿಂದ ನಿರ್ವಹಣೆ ವೆಚ್ಚ: ಪತಿ ವೆಂಕಟರಮಣ ಜೊತೆ ವಿಚ್ಛೇದನ ಪ್ರಕ್ರಿಯೆ ಹಂತದಲ್ಲಿರುವ ಸುಚನಾ ಸೇಠ್, ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ದಾಖಲಿಸಿದ್ದಲ್ಲದೆ ಪತಿ ತನಗೆ 2.5 ಲಕ್ಷ ರೂಪಾಯಿಗಳನ್ನು ಪ್ರತಿ ತಿಂಗಳು ಜೀವನ ನಡೆಸಲು ನಿರ್ವಹಣೆ ವೆಚ್ಚವಾಗಿ ನೀಡಬೇಕೆಂದು ಕೋರಿದ್ದಾಳೆ.

ಮಗುವನ್ನು ಕೊಂದ ನಂತರ ಇದು ಬೆಳಕಿಗೆ ಬಂದಿದ್ದು, ಸುಚನಾ ಸೇಠ್ ತನ್ನ ವಿಚ್ಛೇದಿತ ಪತಿ ವಿರುದ್ಧ ಸಲ್ಲಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ನ್ಯಾಯಾಲಯದ ದಾಖಲೆಗಳಲ್ಲಿ, ತನ್ನ ಪತಿ ತಿಂಗಳಿಗೆ 9 ಲಕ್ಷ ರೂಪಾಯಿಗಳ ಆದಾಯದಂತೆ ವರ್ಷಕ್ಕೆ ಸುಮಾರು 1ಕೋಟಿ ರೂಪಾಯಿ ಆದಾಯ ಹೊಂದಿದ್ದು, ಇದರಿಂದ ತನಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ನೀಡಬೇಕೆಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾಳೆ.

ಸುಚನಾ ಸೇಠ್ ಮಾರ್ಚ್ 2021 ರಿಂದ ಕೌಟುಂಬಿಕ ದೌರ್ಜನ್ಯವನ್ನು ಉಲ್ಲೇಖಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ತನ್ನ ಮತ್ತು ಪತಿಯ ವಾಟ್ಸಾಪ್ ಸಂದೇಶಗಳು, ಚಿತ್ರಗಳು ಮತ್ತು ವೈದ್ಯಕೀಯ ದಾಖಲೆಗಳ ಪ್ರತಿಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಳು. ದಂಪತಿ ನವೆಂಬರ್ 18, 2010 ರಂದು ಕೋಲ್ಕತ್ತಾದಲ್ಲಿ ವಿವಾಹವಾಗಿದ್ದರು. ಆಗಸ್ಟ್ 14, 2019 ರಂದು ದಂಪತಿಗೆ ಗಂಡು ಮಗು ಜನಿಸಿತ್ತು. ಸುಚನಾ ಪತಿ ವೆಂಕಟರಮಣ ವಿರುದ್ಧ  ಆಗಸ್ಟ್ 2022ರಲ್ಲಿ ಕೌಟುಂಬಿಕ ದೌರ್ಜನ್ಯದಡಿ ಪ್ರಕರಣ ದಾಖಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!