ರಾಹುಲ್ಗಿಂತ ಮೋದಿ ಜನಪ್ರಿಯ ಹೇಳಿಕೆ: ಕಾರ್ತಿ ಚಿದಂಬರಂಗೆ ಕಾಂಗ್ರೆಸ್ ನೋಟಿಸ್
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಮಾತ್ರವಲ್ಲ, ಯಾರೂ ಸರಿಸಾಟಿಯಲ್ಲ ಎಂಬ ಹೇಳಿಕೆ ಮೂಲಕ ಪಕ್ಷದ ನಾಯಕರನ್ನು ಕೆರಳಿಸಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಮಗ ಹಾಗೂ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್ಸಿಸಿ) ಶೋಕಾಸ್ ನೋಟಿಸ್ ನೀಡಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ಪುತ್ರ ಮತ್ತು ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದ ಕಾರ್ತಿ ಚಿದಂಬರಂ ಅವರು ಕಾಂಗ್ರೆಸ್ ನೀತಿ ನಿಯಮಗಳ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದು ಈ ಕುರಿತು ವಿವರಣೆ ನೀಡುವಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಹೇಳಿದೆ.
ಇತ್ತೀಚೆಗೆ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿಯನ್ನು ನರೇಂದ್ರ ಮೋದಿಗೆ ಸರಿಸಮನಾದ ನಾಯಕ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ರಾಹುಲ್ ಗಾಂಧಿಗಿಂತ ನರೇಂದ್ರ ಮೋದಿ ಹೆಚ್ಚು ಜನಪ್ರಿಯ ವ್ಯಕ್ತಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗಳಿಗೆ ವಿವರಣೆ ನೀಡುವಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಹೇಳಿದೆ.
ಮತ್ತೊಂದು ಸುದ್ದಿ ವಾಹಿನಿ ಜೊತೆ ಮಾತನಾಡಿದ ಅವರು, ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇವಿಎಂಗಳನ್ನು ತಿರುಚುವ ಮೂಲಕ ಬಿಜೆಪಿ ಅನೇಕ ರಾಜ್ಯಗಳಲ್ಲಿ ಗೆಲ್ಲುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೆ, ಕಾರ್ತಿ ಚಿದಂಬರಂ ಅವರ ಹೇಳಿಕೆಗಳು ಇದಕ್ಕೆ ವ್ಯತಿರಿಕ್ತವಾಗಿವೆ.
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಗೆ ಸವಾಲು ಹಾಕಬಲ್ಲರೇ ಎಂಬ ಪ್ರಶ್ನೆಗೆ, ಮೋದಿ ಅವರಿಗೆ ಯಾರನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಇಂದಿನ ಪ್ರಚಾರದ ವಾಸ್ತವಿಕತೆಯಲ್ಲಿ, ಮೋದಿ ಅವರಿಗೆ ಯಾರನ್ನೂ ಹೋಲಿಸುವುದು ಸಾಧ್ಯವಿಲ್ಲ” ಎಂದು ಕಾರ್ತಿ ಹೇಳಿದ್ದರು. ರಾಹುಲ್ ಗಾಂಧಿ ಸಾಟಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ‘ಕಷ್ಟ’ ಎಂದು ಉತ್ತರಿಸಿದ್ದರು. “ಮುಖಾ ಮುಖಿ ಪಂದ್ಯದಲ್ಲಿ, ಜನಪ್ರಿಯತೆ ವಿಚಾರವನ್ನು ಪರಿಗಣಿಸಿ, ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಸ್ವಾಭಾವಿಕ ಅನುಕೂಲತೆಯನ್ನು ಗಮನಿಸಿದಾಗ ಇದು ಕಷ್ಟಕರ ಎಂದಿದ್ದರು.