ನಗರಸಭೆಯ ಭ್ರಷ್ಟಾಚಾರದ ಕುರಿತು ರಮೇಶ್ ಕಾಂಚನ್ ಶಾಸಕರ ಬಹಿರಂಗ ಚರ್ಚೆಯ ಸವಾಲನ್ನು ಸ್ವೀಕರಿಸಲಿ: ಠಾಕೂರ್

ಉಡುಪಿ: ‘ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್’ ಎಂಬಂತೆ ಉಡುಪಿ ನಗರಸಭೆಯಲ್ಲಿ ಪ್ರಸಕ್ತ ಆಡಳಿತಾಧಿಕಾರಿ ಮತ್ತು ಪೌರಾಯುಕ್ತರ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳ ಭ್ರಷ್ಟಾಚಾರ, ಬ್ರೋಕರ್ ಹಾವಳಿ, ಕಳಪೆ ಕಾಮಗಾರಿ ಮಿತಿ ಮೀರಿದ್ದು, ಈ ಬಗ್ಗೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಯತ್ನದಲ್ಲಿರುವ ಕಾಂಗ್ರೆಸ್ ನಗರಸಭಾ ಸದಸ್ಯ ರಮೇಶ್ ಕಾಂಚನ್ ಭ್ರಷ್ಟಾಚಾರ ಕುರಿತಂತೆ ಶಾಸಕರ ಬಹಿರಂಗ ಚರ್ಚೆಯ ಸವಾಲನ್ನು ಸ್ವೀಕರಿಸಲಿ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದ್ದಾರೆ.

ನಗರಸಭೆ ಸಂಬಂಧಿಸಿದ ಖಾತಾ ಬದಲಾವಣೆ, ಇ-ಖಾತಾ, ಬ್ರೋಕರ್ ಹಾವಳಿ, ಕಳಪೆ ಕಾಮಗಾರಿ, ಅಧಿಕಾರಿಗಳ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಸಾಕ್ಷಿ ಸಮೇತ ಎಲ್ಲಾ ದಾಖಲೆಗಳ ಸಹಿತ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರವರ ಸವಾಲನ್ನು ಸ್ವೀಕರಿಸಿದಲ್ಲಿ ಉಡುಪಿ ನಗರದ ಜನತೆಗೆ ನ್ಯಾಯ ಒದಗಿಸಿದಂತಾಗುವುದು.

ನಗರಸಭೆಯ ದುರಾಡಳಿತದಿಂದ ರೋಸಿಹೋಗಿರುವ ಜನತೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದು, ಪ್ರಸಕ್ತ ಬಿಜೆಪಿ ನಗರಸಭಾ ಸದಸ್ಯರ ಸಂಖ್ಯಾಬಲ 32 ರಷ್ಟಿದ್ದರೂ ಕೇವಲ 3 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಹಿಂಬಾಗಿಲಿನಿಂದ ಆಡಳಿತ ವ್ಯವಸ್ಥೆಯಲ್ಲಿ ಕೈಯಾಡಿಸುತ್ತಿರುವುದು ವಿಪರ್ಯಾಸವಾಗಿದೆ.

ನಗರಸಭೆ ಆಡಳಿತಾಧಿಕಾರಿಗಳು ಮತ್ತು ಪೌರಾಯುಕ್ತರು ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ಜೊತೆಗೆ ಮೂಲಭೂತ ಆದ್ಯತೆಯಾಗಿರುವ ಕುಡಿಯುವ ನೀರಿನ ದರವನ್ನು ಮೂರು ಪಟ್ಟು ಹೆಚ್ಚಳ ಮಾಡುವ ಜನ ವಿರೋಧಿ ನಿರ್ಣಯ ಕೈಗೊಂಡಿರುವುದು ಖಂಡನೀಯ. ‘ಅಪಪ್ರಚಾರವೇ ಕಾಂಗ್ರೆಸ್ ಜೀವಾಳ’ ಎಂಬಂತೆ ಕಾಂಗ್ರೆಸ್ಸಿಗರು ಬಿಜೆಪಿ ವಿರುದ್ಧ ವಿವಿಧ ಸನ್ನಿವೇಶಗಳಲ್ಲಿ ಯಾವ ರೀತಿಯ ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ.

ನಗರಸಭೆಯ ಆಡಳಿತದ ಪ್ರಥಮ ಅವಧಿ ಮುಗಿದು ಎಂಟು ತಿಂಗಳು ಕಳೆದರೂ ಎರಡನೇ ಅವಧಿಯ ಆಡಳಿತದ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರ ದಿವ್ಯ ನಿರ್ಲಕ್ಷ್ಯ ತೋರಿದಂತೆ ಕಂಡುಬರುತ್ತಿದೆ. ಜಿಲ್ಲೆಗೆ ಅತಿಥಿಯಂತೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಷ್ಠಿತ ಉಡುಪಿ ನಗರಸಭೆಯ ಬ್ರಹ್ಮಾಂಡ ಭ್ರಷ್ಟಾಚಾರ, ದುರಾಡಳಿತ, ಬ್ರೋಕರ್ ಹಾವಳಿ, ಕಳಪೆ ಕಾಮಗಾರಿ ಹಾಗೂ ಜನ ವಿರೋಧಿ ನೀತಿಗಳತ್ತ ತುರ್ತು ಗಮನ ಹರಿಸುವುದು ಸೂಕ್ತ. ಜನತೆ ನಗರಸಭೆಯ ಅವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು ಕಾಂಗ್ರೆಸ್ ಕೃಪಾಪೋಷಿತ ದುರಾಡಳಿತಕ್ಕೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಹೇಶ್ ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!