ಉಡುಪಿ: ರೈತ ದಿನಾಚರಣೆ, ಕೃಷಿ ಮೇಳ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿ ವತಿಯಿಂದ ನಡೆಯಲಿರುವ ರೈತ ದಿನಾಚರಣೆ ಮತ್ತು ಕೃಷಿ ಮೇಳದ ಆಮಂತ್ರಣ ಪತ್ರಿಕೆಯನ್ನು ಪೆರಂಪಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ರೈತ ದಿನಾಚರಣೆ ಹಾಗೂ ಕೃಷಿ ಮೇಳವು ಜ.28ರಂದು ಬೆಳಗ್ಗೆ 9.30ರಿಂದ ಸಂಜೆ 4.30ವರೆಗೆ ಪೆರಂಪಳ್ಳಿ ಇನ್ಫೆಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪೆರಂಪಳ್ಳಿ ಫಾತಿಮಾ ಮಾತೆ ಚರ್ಚ್ ಧರ್ಮಗುರುಗಳಾದ ವಂ.ಅನಿಲ್ ಡಿಸೋಜಾ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಪೆರಂಪಳ್ಳಿ ವಲಯ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಹರಿಕೃಷ್ಣ ಶಿವತ್ತಾಯ, ನಗರಸಭಾ ಸದಸ್ಯರಾದ ಅನಿತಾ ಬೆಲಿಂಡ ಡಿಸೋಜಾ, ಧರ್ಮಗುರುಗಳಾದ ಬ್ರಿಯಾನ್ ಅಂತೋನಿ ಡಿಸೋಜಾ, ಫೆಡ್ರಿಕ್ ಡಿಸೋಜಾ, ಸೋಮನಾಥ ಪೂಜಾರಿ, ಅಂತಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕೃಷಿ ಅಧಿಕಾರಿ ವೆಂಕಟೇಶ್ ಇಲಾಖೆಯಿಂದ ಕೃಷಿ ಮತ್ತು ಸ್ವಂತ ಉದ್ಯೋಗಕ್ಕಾಗಿ ಸಿಗುವ ಸಾಲ ಸೌಲಭ್ಯಗಳ ಮಾಹಿತಿಯನ್ನು ರೈತರಿಗೆ ನೀಡಿದರು. ಸುಬ್ರಹ್ಮಣ್ಯ ಶ್ರೀಯಾನ್ ಪೆರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಂದಿಸಿದರು.