ವೃದ್ದ ದಂಪತಿಗಳ ಭೀಕರ ಕೊಲೆಗೈದ ಸುಖೇಶ ನಾಯಕ ಗ್ಯಾಂಗ್‌ಗೆ ಜೀವಾವಧಿ ಶಿಕ್ಷೆ ಪ್ರಕಟ

ಅಂಕೋಲಾ: ಇಲ್ಲಿನ ಜನ‌ತೆಯನ್ನು ಬೆಚ್ಚಿ ಬಿಳಿಸಿದ್ದ ವೃದ್ಧ ದಂಪತಿಗಳ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಸುಖೇಶ ನಾಯಕ ಗ್ಯಾಂಗ್‌ಗೆ ಜೀವಾವಧಿ ಶಿಕ್ಷೆಯನ್ನು ಜಿಲ್ಲಾ ಸತ್ರ ನ್ಯಾಯಾಲಯವು ಇಂದು ಪ್ರಕಟಿಸಿ ಆದೇಶ ನೀಡಿದೆ.

ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗ ಸುಖೇಶ ಚಂದ್ರು ನಾಯಕ (42), ಬೆಂಗಳೂರಿನ ಇಂಡಸ್ಟ್ರೀಯಲ್ ಜಿಗಣೆ ಏರಿಯಾದ ವೆಂಕಟರಾಜಪ್ಪ, ಭರತ್ ಇ, ನಾಗರಾಜ್ ವಾಯ್ ಅಫರಾಧಿಗಳೆಂದು ಸಾಬೀತಾದವರಾಗಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.

ಕೊಲೆ ಮಾಡಿದ ನಾಲ್ಕು ಅಫರಾದಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ಎರಡು ಲಕ್ಷ ರೂ ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಒಂದು ವರ್ಷ ಸಜೆ ಹಾಗೂ ದರೋಡೆ ಮಾಡಿದ್ದಕ್ಕಾಗಿ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ ದಂಡ, ದಂಡ ತಪ್ಪಿದಲ್ಲಿ 6 ತಿಂಗಳ ಕಾರಾಗ್ರಹ ಶಿಕ್ಷೆ ಮತ್ತು ಸಾಕ್ಷಿ ನಾಶ ಮಾಡಿದ್ದಕ್ಕಾಗಿ 3 ವರ್ಷ ಕಠಿಣ ಕಾರಾಗ್ರಹ ಶಿಕ್ಷೆ, ತಲಾ 5 ಸಾವಿರ ರೂ ದಂಡ, ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಜೆ ಹಾಗೂ ಕೊಲೆ ಪೂರ್ವ ಸಂಚು ರೂಪಿಸಿದಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ ದಂಡ, ತಪ್ಪಿದಲ್ಲಿ 6 ತಿಂಗಳ ಶಿಕ್ಷೆ ಪ್ರಕಟಿಸಲಾಗಿದೆ. ಈ ಆದೇಶವು ಏಕಕಾಲದಲ್ಲಿ ಜಾರಿಗೊಳಿಸತಕ್ಕದ್ದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಸರಕಾರದ ವಿಶೇಷ ಅಭಿಯೋಜಕರಾದ ಶಿವಪ್ರಸಾದ ಆಳ್ವ ಕೆ. ಅವರು ಸಮರ್ಥವಾಗಿ ವಾದ ಮಂಡಿಸಿ, ನ್ಯಾಯಾಲಯಕ್ಕೆ ಈ ನಾಲ್ಪರು ಆರೋಪಿಗಳು ಕೃತ್ಯದಲ್ಲಿ ಪಾಲ್ಗೊಂಡಿರುವದನ್ನು ಸಾಬಿತು ಪಡಿಸಿದ್ದರು. ಹಾಗೆ ಕಠಿಣ ಜೀವಾವಧಿ ಶಿಕ್ಷೆಯನ್ನ ನೀಡುವಂತೆ ತಮ್ಮ ಅಭಿಪ್ರಾಯವನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದರು.

ನ್ಯಾಯಾಧೀಶ  ವಿಜಯಕುಮಾರ ಅವರ ಪ್ರಕರಣವನ್ನು ಆಳವಾಗಿ ಅಧ್ಯಯನ ನಡೆಸಿ ಅಂತಿಮವಾಗಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನ ಪ್ರಕಟಿಸಿದ್ದಾರೆ. ಕೊಲೆ ಹಾಗೂ ದರೋಡೆಯ ಪ್ರಕರಣದ ಮೇಲೆ ಸುಖೇಶ ನಾಯಕ ಗ್ಯಾಂಗ್ ಜೀವಾವದಿ ಶಿಕ್ಷೆಗೆ ಒಳಪಟ್ಟಿದ್ದಾರೆ.

ತೀವ್ರ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಆಂದ್ಲೆಯಲ್ಲಿ ನಡೆದ ಗುತ್ತಿಗೆದಾರ ನಾರಾಯಣ ಬೊಮ್ಮಯ್ಯ ನಾಯಕ (78) ಹಾಗೂ ಇವರ ಪತ್ನಿ ಸಾವಿತ್ರಿ ನಾರಾಯಣ ನಾಯಕ (68) ವೃದ್ಧ ದಂಪತಿಗಳ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು, ಅಪಧಾರಿಗಳೆಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಅವರು ಡಿ.27 ರಂದು ತಿರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು 2024 ರ ಜನವರಿ 2 ರಂದು ಪ್ರಕಟಿಸುದಾಗಿ ಆದೇಶಿಸಿದ್ದರು.

ಜನವರಿ 2 ರಂದು ಆರೋಪಿಗಳ ಎದುರು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಘೋಷಿಸಿದರು. ಈಗಾಗಲೇ ಸಾಂದರ್ಬಿಕ ಸಾಕ್ಷಿಯ ಅಡಿಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ ಕಲಂ ಅಡಿಯಲ್ಲಿ ಪ್ರಮುಖವಾಗಿ ಕೊಲೆ ಮಾಡಿದ್ದು ಸಾಬೀತಾಗಿರುವದು (ಐಪಿಸಿ 302), ಸಾಕ್ಷಿ ನಾಶ (ಐಪಿಸಿ 201), ಕೊಲೆಗೆ ಪೂರ್ವ ಸಂಚು (ಐಪಿಸಿ 120(ಬಿ)ಹಾಗೂ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶ (ಐಪಿಸಿ 449) ಹಾಗೂ ದರೋಡೆ (ಐಪಿಸಿ 392) ಈ ಆಪಾದನೆಗಳು ಅಪರಾಧ ಎಸೆಗಿರುವದು ಸ್ಪಷ್ಠವಾದ ಹಿನ್ನಲೆಯಲ್ಲಿ ಅಪರಾಧಿಗಳಿಗೆ ಜೀವಾವಧಿಯ ಶಿಕ್ಷೆ ಎದುರಾಗಿದೆ.

ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಅಪರಾಧಿಗಳು ಈ ಪ್ರಕರಣದಲ್ಲಿ ಸಿಕ್ಕಿ ಬೀಳಬಾರದೆಂದು ಬಹಳ ಚಾಕಚಕ್ಯತೆಯಿಂದ ಕೊಲೆ ಮಾಡಿ ದರೋಡೆ ಮಾಡಿದ್ದರು. ಆದರೆ ನ್ಯಾಯಾಲಯದಲ್ಲಿ ಸಾಂದರ್ಬಿಕ ಸಾಕ್ಷಿಗಳನ್ನು ಒಟ್ಟುಗೂಡಿಸಿ, ಇವರೆ ಕೊಲೆ ಮಾಡಿದ್ದಾರೆ ಎಂದು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಾನೂನಿನ ಕೈ ತುಂಬಾ ದೊಡ್ಡದಿದೆ. ಕಾನೂನಿನಲ್ಲಿ ಎಲ್ಲ ಸಾಕ್ಷಿಗಳನ್ನು ಒಟ್ಟುಗೂಡಿಸಿದರೆ ಎಂತಾ ಆರೋಪಿಗಳನ್ನು ಸಹ ಶಿಕ್ಷಗೆ ಒಳಪಡಿಸಬಹುದು ಎನ್ನುವದಕ್ಕೆ ಈ ಪ್ರಕರಣವು ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ತೀರ್ಪು ಆಗಿದೆ.

ಶಿವಪ್ರಸಾದ ಆಳ್ವ ಸರಕಾರದ ವಿಶೇಷ ಅಭಿಯೋಜಕರು.

ಪ್ರಕರಣ ಏನಾಗಿತ್ತು: 2019 ಡಿ.19 ರಂದು ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಆಂದ್ಲೆಯಲ್ಲಿ ಕೈಕಾಲು ಕಟ್ಟಿ ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಗುತ್ತಿಗೆದಾರ ನಾರಾಯಣ ಬೊಮ್ಮಯ್ಯ ನಾಯಕ (78)  ಹಾಗೂ ಇವರ ಪತ್ನಿ ಸಾವಿತ್ರಿ ನಾರಾಯಣ ನಾಯಕ (68)  ಅವರು ಕೊಲೆಯಾಗಿದ್ದರು. ದುಷ್ಕರ್ಮಿಗಳು ಮನೆಯ ಹಿಂಬದಿಯ ಬಾಗಿಲಿನಿಂದ ಒಳನುಗ್ಗಿ, ದಂಪತಿಗಳ ಮೇಲೆ ಖಾರದ ಪುಡಿಎರಚಿ ಹತ್ಯೆಗೈದಿದ್ದರು. ಮನೆಯ ಹಿಂಬದಿಯ ಬಾಗಿಲಿನ ಹೊರಗಡೆ ನಾರಾಯಣ ನಾಯಕ ಅವರ ಮೃತದೇಹವು ಕೈಕಾಲುಕಟ್ಟಿ ಹಾಕಿದ ರೀತಿಯಲ್ಲಿ ಮತ್ತು ಸಾವಿತ್ರಿ ನಾಯಕ ಅವರ ಮೃತದೇಹವು ಮನೆಯೊಳಗಿನ ಕೊಠಡಿಯಲ್ಲಿ ಬೆಡ್‌ಶೀಟ್‌ನಿಂದ ಕೈಕಾಲುಗಳನ್ನುಕಟ್ಟಿ, ಬಾಯಿಗೆ ಗಮ್‌ ಟೇಪ್ ಸುತ್ತಿ ಕೊಲೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!