ಅನ್ನಭಾಗ್ಯದ ಅಕ್ಕಿಯಿಂದಲೇ ಮಂತ್ರಾಕ್ಷತೆ: ಡಿಕೆಶಿ ಹೇಳಿಕೆಗೆ ಬಿಜೆಪಿ ತೀವ್ರ ಕಿಡಿ

ಬೆಂಗಳೂರು: ರಾಜ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಯನ್ನು ಬಳಸಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರು ಮಂತ್ರಾಕ್ಷತೆ ಹಂಚುತಿದ್ದಾರೆ” ಎಂಬ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ತೀವ್ರ ಕಿಡಿಕಾರಿದೆ.

ಡಿಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಅನ್ನಭಾಗ್ಯ ಯೋಜನೆಯಡಿ ಕೇಂದ್ರದಿಂದ 5 ಕೆಜಿ ಅಕ್ಕಿ ವಿತರಣೆಯಾಗುತ್ತಿದೆ ಎಂಬುದನ್ನು ಶಿವಕುಮಾರ್ ಮರೆತಿರಬಹುದು. ಹಾಗಾಗಿ ಅಕ್ಕಿ ವಿತರಿಸಿದ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲಬೇಕು ಎಂದು ತಿರುಗೇಟು ನೀಡಿದರು. ಇದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಧ್ವನಿಗೂಡಿಸಿದ್ದು, ಡಿಬಿಟಿ ವ್ಯವಸ್ಥೆ ಮೂಲಕ 5 ಕೆಜಿ ಅಕ್ಕಿಗೆ ನಗದು ಜಮಾ ಮಾಡುವುದಾಗಿ ಘೋಷಿಸಿರುವ ಕಾಂಗ್ರೆಸ್ ಸರ್ಕಾರ ಒಂದು ಕಾಳು ಅಕ್ಕಿ ನೀಡುತ್ತಿಲ್ಲ ಎಂಬುದು ನಿಸ್ಸಂದೇಹವಾಗಿ ಇದರಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.

ಉಳಿದ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ವಿತರಿಸುತ್ತಿದೆ ಎಂಬುದನ್ನು ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವೇ ಇದನ್ನು ಘೋಷಣೆ ಮಾಡಿದೆ. ಹಾಗಾಗಿ, ರಾಜ್ಯದ ಅಕ್ಕಿಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಜನವರಿ 22 ರಂದು ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸುವಂತೆ ಮುಜರಾಯಿ ಇಲಾಖೆ ಆದೇಶ ಹೊರಡಿಸಿರುವ ಕುರಿತು ಪ್ರತಿಕ್ರಿಯಿಸಿ, ಉಪಮುಖ್ಯಮಂತ್ರಿ ತಮ್ಮನ್ನು ‘ರಾಮಭಕ್ತ’ ಎಂದು ಕರೆದುಕೊಳ್ಳುತ್ತಿರುವುದು ಹಾಗೂ ವಿಶೇಷ ಪೂಜೆಗೆ ವ್ಯವಸ್ಥೆ ಮಾಡುತ್ತಿರುವ ಸರ್ಕಾರ ಶ್ರೀರಾಮನ ಮುಂದೆ ಶರಣಾಗಿದಂತಾಗಿದೆ ಎಂದು ಕರೆಯಬಹುದು ಎಂದು ಹೇಳಿದರು.

ಡಿಕೆಶಿ ಹೇಳಿದ್ದೇನು?
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ನಮ್ಮನ್ನ ಕರೆದಿಲ್ಲ ಎಂದು ಸೋಮವಾರ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಗಳನ್ನು ಸಹ ಕರೆದಿಲ್ಲ. ನಾನು ಶಿವ ಭಕ್ತ, ಆಂಜನೇಯನ ಮೂರ್ತಿ ಇಲ್ಲಿದೆ ನೋಡಿ. ಎಲ್ಲಾ ದೇವರುಗಳು ನನ್ನ ಹೃದಯದಲ್ಲಿದೆ. ಅರಿಶಿನ ಅಕ್ಕಿ ಸೇರಿಯೇ ಮಂತ್ರಾಕ್ಷತೆಯಾಗುವುದು. ನಮ್ಮ ಅನ್ನಭಾಗ್ಯ ಯೋಜನೆಯಿಂದಲೇ ಅಕ್ಷತೆ ಆಗುತ್ತಿದೆ ಎಂಬುದು ಸಂತೋಷದ ವಿಚಾರ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!