ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ, ಶಾಸಕ ನಂಜೇಗೌಡರ ಮನೆಯಲ್ಲಿ ಮುಂದುವರೆದ ಇಡಿ ಪರಿಶೀಲನೆ
ಬೆಂಗಳೂರು: ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆಸಿ, ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಬೆಂಗಳೂರು, ಮಂಡ್ಯ, ವಿಜಯನಗರ ಹಾಗೂ ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. ಬೆಂಗಳೂರು ಬಿಬಿಎಂಪಿ ಅಧಿಕಾರಿ ಮಂಜು ಸಂಬಂಧಿಗಳ ಮಂಡ್ಯದಲ್ಲಿರುವ ಮನೆಗಳ ಮೇಲೆ ದಾಳಿ ಹಾಗೂ ಮಂಡ್ಯ ಜಿಲ್ಲೆಯ ಹಲಗೂರು ಗ್ರಾ.ಪಂ ಸದಸ್ಯ ಸುರೇಂದ್ರ ಎಂಬುವವರ ಮನೆ ಮೇಲೆ ರೇಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಬೆಸ್ಕಾಂ ಜನರಲ್ ಮ್ಯಾನೇಜರ್ ಆಗಿರುವ ನಾಗರಾಜ್ ವಿರುದ್ಧ ಅಕ್ರಮ ಆಸ್ತಿ ಆರೋಪ ಕೇಳಿ ಬಂದಿದ್ದು, ಕೂಡ್ಲಿಗಿ, ಗುಡೇಕೋಟೆ ನಿವಾಸ, ಪೆಟ್ರೋಲ್ ಬಂಕ್ ಹಾಗೂ ಸಂಬಂಧಿಕರ ನಿವಾಸದ ಮೇಲೆ ಬಳ್ಳಾರಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ನಾಗರಾಜ್ಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮೇಲೆಯೂ ದಾಳಿ ನಡೆದಿದೆ. ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಬಿಬಿಎಂಪಿ ಅಧಿಕಾರಿ ಮಂಜು ಎಂಬವವರ ಸಂಬಂಧಿ, ಹಲಗೂರು ಗ್ರಾ.ಪಂ ಸದಸ್ಯ ಸುರೇಂದ್ರ ಎಂಬವವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಳವಳ್ಳಿ ತಾಲೂಕು ಹಲಗೂರು ಪಟ್ಟಣದ ಜೆಪಿಎಂ ಬಡಾವಣೆಯಲ್ಲಿನ ಸುರೇಂದ್ರ ಅವರಿಗೆ ಸೇರಿದ ಮನೆ, ಸ್ವಗ್ರಾಮ ಗುಂಡಾಪುರ ಗ್ರಾಮದಲ್ಲಿ ಮನೆಗಳ ಮೇಲೂ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
ನಂಜೇಗೌಡ ನಿವಾಸದಲ್ಲಿ ಮುಂದುವರಿದ ಶೋಧ ಕಾರ್ಯ
ಈ ನಡುವೆ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯ ನಂಜೇಗೌಡ ನಿವಾಸ, ನಂಜುಂಡೇಶ್ವರ ಸ್ಟೋನ್ ಕ್ರಷರ್, ಕೋಚಿಮುಲ್ ಕೇಂದ್ರ ಕಚೇರಿಯಲ್ಲಿ ಶೋಧ ನಡೆಯುತ್ತಿದೆ. ನಿನ್ನೆಯಿಂದ ಶಾಸಕ ನಂಜೇಗೌಡ ಹಾಗು ಕುಟುಂಬಸ್ಥರನ್ನ ಹೊರಗೆ ಕಳುಹಿಸದೇ ಮನೆಯಲ್ಲಿರೋ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ.