ಜಾಗತಿಕ ಮಾರುಕಟ್ಟೆಯಲ್ಲಿ ನಂದಿನಿ ಬ್ರಾಂಡ್‌ ಬೃಹತ್‌ ಮಟ್ಟದಲ್ಲಿ ವಿಸ್ತರಣೆ: ಎಂ.ಕೆ ಜಗದೀಶ್

ಮಣಿಪಾಲ: ರಾಜ್ಯದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಪರಿಹರಿಸುವುದರ ಜೊತೆಗೆ ರೈತರ ಜೀವನಾಧಾರವಾಗಿರುವ ಕೆಎಂಎಫ್‌ ನಂದಿನಿ ಸಾಗರೋತ್ತರದಲ್ಲಿಯೂ ಬಹು ಬೇಡಿಕೆ ಪಡೆದುಕೊಳ್ಳುತ್ತಿದೆ ಎಂದು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್‌ ಎಂ.ಕೆ ಹೇಳಿದರು.

ಭಾರತೀಯ ಸಂಜಾತ ಅಮೆರಿಕನ್‌ ವೈದ್ಯರ ಒಕ್ಕೂಟ (AAPI) ವತಿಯಿಂದ ಮಣಿಪಾಲದ ಫಾರ್ಚೂನ್‌ ವ್ಯಾಲಿ ವ್ಯೂ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಆರೋಗ್ಯ ಶೃಂಗಸಭೆಯ ಎರಡನೇ ದಿನ ನಡೆದ ಸಿಇಒ ಫೋರಂನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ನೂರಾರು ವೈದ್ಯರ ಸಮಾಗಮದೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತಾದ ವಿಚಾರ ಸಂಕಿರಣದ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಅವರು, ನಂದಿನಿ ಹಾಲಿನ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ ಜೊತೆಗೆ ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ನೀಡುತ್ತಿದೆ. ಪ್ರಸ್ತುತ ನಡೆಯುತ್ತಿರುವ ಈ ಹೆಲ್ತ್‌ ಸಮ್ಮಿಟ್‌ನ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಬ್ರಾಂಡ್‌ ಅನ್ನು ವಿಸ್ತರಿಸುವ ಆಶಯವನ್ನು ಕೆಎಂಎಫ್‌ ಹೊಂದಿದೆ. ಕೆಎಂಎಫ್‌ ಸಂಸ್ಥೆಯು ನಂದಿನಿ ಹೆಸರಿನಡಿ ಹಲವು ಉತ್ಪನ್ನಗಳನ್ನು ಪರಿಚಯಿಸಿದ್ದು, ಕರ್ನಾಟಕದಾದ್ಯಂತ ಪ್ರತಿನಿತ್ಯ 45 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿದೆ. ಮಂಡಳಿಯು ಶೇ. 84ರಷ್ಟು ಲಾಭವನ್ನು ನೇರವಾಗಿ ರೈತರಿಗೆ ನೀಡುತ್ತಿದೆ ಎಂದು ಹೇಳಿದರು. ‌

ಫಾರ್ಮಸಿಟಿಕಲ್ಸ್‌ ಮತ್ತು ಹೆಲ್ತ್‌ಕೇರ್‌ ನಲ್ಲಿ ಜೈಡಸ್‌ ಸಂಸ್ಥೆಯು ಅಮೆರಿಕದ ಅಗ್ರ 5 ಸಂಸ್ಥೆಗಳಲ್ಲಿ ಒಂದಾಗಿದೆ. ಕೋವಿಡ್‌-19ಗೆ ಚುಚ್ಚುಮದ್ದು ರಹಿತ ಲಸಿಕೆಯನ್ನು ಜಾಗತಿಕವಾಗಿ ಪರಿಚಯಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಜೈಡಸ್‌ಗೆ ಸಲ್ಲುತ್ತದೆ ಎಂದು ಜೈಡಸ್‌ ಲೈಫ್‌ಸೈನ್ಸಸ್‌ ಲಿಮಿಡೆಟ್‌ನ ವ್ಯವಸ್ಥಾಪಕ ನಿರ್ದೇಶಕರಾದ ಗಣೇಶ್‌ ನಾಯಕ್‌ ತಿಳಿಸಿದರು.

ವೇದಿಕೆಯಲ್ಲಿದ್ದ ಇತರೆ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸಂಸ್ಥೆಗಳು ನೀಡುತ್ತಿರುವ ಕೊಡುಗೆಗಳನ್ನು ಸಭೆಯಲ್ಲಿ ಸೇರಿದ ವೈದ್ಯಕೀಯ ಸಮೂಹದೊಂದಿಗೆ ಹಂಚಿಕೊಂಡರು.

ಸಿಇಒ ಫೋರಂ ನ ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಪ್ರೊ.ಎಂ.ಡಿ ನಲಪಾಟ್‌,ಎಎಪಿಐ ಜಿಹೆಚ್‌ಎಸ್‌ ದೆಹಲಿ ಮತ್ತು ಮಣಿಪಾಲದ ಮುಖ್ಯಸ್ಥರಾದ ಡಾ. ಸಂಪತ್‌ ಶಿವಾಂಗಿ, ಎಎಪಿಐ ಅಧ್ಯಕ್ಷರಾದ ಡಾ. ಅಂಜನಾ ಸಮದ್ದಾರ್‌, ಜಾಗತಿಕ ಹೆಲ್ತ್‌ಕೇರ್ ಸಮ್ಮಿಟ್ ಸಿಇಒ ಫೋರಂ, ಮಣಿಪಾಲ‌ದ ಮುಖ್ಯಸ್ಥರು ಡಾ. ಸುಬ್ರಹ್ಮಣ್ಯ ಭಟ್‌, ಡಾ. ವಿಜಯ್ ಗೋಪಾಲ್ ಮತ್ತು ಡಾ.ಕೃಷ್ಣ ನಾಯಕ್‌ ಉಪಸ್ಥಿತರಿದ್ದರು.

ನಂತರ ನಡೆದ ಮಹಿಳಾ ವೇದಿಕೆ ಕಾರ್ಯಕ್ರಮದಲ್ಲಿ ಟ್ರಾವನ್‌ಕೋರ್‌ ಪ್ರಿನ್ಸಸ್‌ ಲಕ್ಷ್ಮೀ ಬಾಯಿ ನಲಪಾಟ್‌, ಎಎಪಿಐ ಯುಸ್‌ ಅಧ್ಯಕ್ಷರಾದ ಡಾ. ಅಂಜನಾ ಸಮದ್ದಾರ್‌, ಎನ್‌ಆರ್‌ಐ ಕರ್ನಾಟಕ ಫೋರಂ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಡಾ. ಉದಯ ಶಿವಾಂಗಿ, ಡಾ. ಅನ್ನಪೂರ್ಣ ಭಟ್‌, ಡಾ. ಊರ್ಮಿಳ ಕೋವಿಲಂ ಉಪಸ್ಥಿತರಿದ್ದರು.

ರಾಜ್ಯಕ್ಕೆ ಭೇಟಿ ಕೊಟ್ಟ ಅಮೆರಿಕಾದ ಭಾರತೀಯ ಸಂಜಾತ ನೂರಾರು ವೈದ್ಯರ ಸಮೂಹ ಇಂದು ಬೆಳ್ಳಂಬೆಳಗ್ಗೆ ಉಡುಪಿಯ ‍ಶ್ರೀಕೃಷ್ಣನ ದರ್ಶನ ಪಡೆದರು. ಸಂಜೆ ಹಸ್ತ ಶಿಲ್ಪ ಹೆರಿಟೇಜ್‌ ವಿಲ್ಲೇಜ್‌ ಮ್ಯೂಸಿಯಂ ಗೆ ಭೇಟಿ ನೀಡಿದರು. ನಂತರದಲ್ಲಿ ಸಮ್ಮಿಟ್‌ನ ವೇದಿಕೆಯಲ್ಲಿ ಆಳ್ವಾಸ್‌ ನುಡಿಸಿರಿ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಎರಡು ದಿನಗಳ ಜಾಗತಿಕ ಆರೋಗ್ಯ ರಕ್ಷಣಾ ಶೃಂಗಸಭೆಗೆ ತೆರೆಬಿದ್ದಿತು. ‌

Leave a Reply

Your email address will not be published. Required fields are marked *

error: Content is protected !!