ಯೋಗಪಟು ತನುಶ್ರೀ ಸಂಸ್ಕೃತಿ ಯೋಗದ ಯೋಧೆ: ಸುಭಾಸ್ ಬೈಲೂರು
ಉಡುಪಿ: ದೇಶದ ಗಡಿ ಕಾಯುವ ಸೈನಿಕರು ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ದೇಶ ರಕ್ಷಣೆಯ ಕಾಯಕದಿಂದ ಯೋಧರಾಗಿ ಗುರುತಿಸಿಕೊಂಡರೆ ಯೋಗಪಟು ತನುಶ್ರೀ ಪಿತ್ರೋಡಿ, ಈ ನೆಲದ ಸಂಸ್ಕೃತಿಯ ಯೋಗವನ್ನು ವಿಭಿನ್ನ ಶೈಲಿಯಲ್ಲಿ ಪ್ರಚುರ ಪಡಿಸುವ ಮೂಲಕ ಯೋಗದ ಯೋಧೆಯಾಗಿದ್ದಾಳೆ ಎಂದು ಮಾಜಿ ಸೈನಿಕ, ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರಿ ಸಂಘದ ಸುಭಾಸ್ ಬೈಲೂರು ಹೇಳಿದ್ದಾರೆ.
ಉಡುಪಿಯ ಸೈಂಟ್ ಸಿಸಿಲಿಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ತನು ಯೋಗ ಭೂಮಿ ಕಾರ್ಯಕ್ರಮದ 100ರ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸನ್ಮಾನ: ಈ ಸಂದರ್ಭದಲ್ಲಿ ಮಾಜಿ ಸೈನಿಕ ವ್ಯಾಸರಾಜ ಶರವೂರು, ಕೃಷಿಕ ಜುಲಿಯನ್ ದಾಂತಿ, ರಂಗಭೂಮಿ ಕಲಾವಿದ ಗಂಗಾಧರ್ ಕಿದಿಯೂರು, ನಗರಸಭೆ ಪೌರ ಕಾರ್ಮಿಕ ಸುರೇಶ್, ಸಾಹಿತಿ ಧೀರಜ್ ಬೆಳ್ಳಾರೆ, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ರಾಷ್ಟ್ರೀಯ ಯೋಗಪಟುಗಳಾದ ನಾಜಿಯಾ ಕಾರ್ಕಳ, ನಿರೀಕ್ಷಾ ಪೂಜಾರಿ, ಅನ್ವಿ ಅಂಚನ್, ಉದ್ಭವ್ ಜಿ. ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಸೈಂಟ್ ಸಿಸಿಲಿಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮಯೋಲಾ ಸಿಸ್ಟರ್ ಅಧ್ಯಕ್ಷತೆ ವಹಿಸಿದ್ದರು. ನೃತ್ಯಗುರು ರಾಮಕೃಷ್ಣ ಕೊಡಂಚ, ಕಾರ್ತಿಕ್ ಕಡೆಕಾರ್, ವಿಜಯಕುಮಾರ್, ರಾಕೇಶ್ ಕಟಪಾಡಿ, ಉಡುಪಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಗಾಯತ್ರಿ ಮುತ್ತಪ್ಪ ಕೆ. ಉಪಸ್ಥಿತರಿದ್ದರು.
ಉದಯ ಕುಮಾರ್ ಪಿತ್ರೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲ ನಟಿ ರಿತುಶ್ರೀ ಪಿತ್ರೋಡಿ ಪ್ರಾರ್ಥಿಸಿದರು. ಸಂಧ್ಯಾ ಪಿತ್ರೋಡಿ ಸಹಕರಿಸಿದರು. ನಾಗರಾಜ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.
ಗಮನ ಸೆಳೆದ ತನುಶ್ರೀ ಯೋಗ ನೃತ್ಯ
ಯೋಗ ಪಿತಾಮಹ ಪತಂಜಲಿ ಋಷಿಯ ಕುರಿತು, ಯೋಗದ ಮಹತ್ವ, ಯೋಗಾಭ್ಯಾಸದಿಂದಾಗುವ ಅನುಕೂಲ ಹಾಗೂ ಭಾರತ ದೇಶದ ವಿಶಿಷ್ಟತೆ ಕುರಿತಂತೆ ಯೋಗಪಟು ತನುಶ್ರೀ ಪಿತ್ರೋಡಿ ಯೋಗನೃತ್ಯ ಪ್ರದರ್ಶನ ಮೂಲಕ ಸಭಿಕರ ಗಮನ ಸೆಳೆದರು.
ಸುಮಾರು 40 ನಿಮಿಷಗಳ ಕಾಲ ನಾನಾ ಯೋಗಾಸನಗಳ ಪ್ರಕಾರಗಳನ್ನು ಪ್ರಸ್ತುತಪಡಿಸಿದ ಅವರು, ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದರು. ಇದುವರೆಗೆ ತನುಯೋಗ ಭೂಮಿ ಕಾರ್ಯಕ್ರಮವನ್ನು 100 ಶಾಲೆಗಳ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವೀಕ್ಷಿಸಿದ್ದಾರೆ