ಜ.8ಕ್ಕೆ ಬೆಂಗಳೂರಿನಲ್ಲಿ ಬಿಜೆಪಿಯಿಂದ ‘ವಿಜಯ ಸಿದ್ಧತಾ ಸಭೆ’

ಉಡುಪಿ, ಜ.7: ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ದೊಡ್ಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಇದರ ಅಂಗ ವಾಗಿ ಜನವರಿ 8ರಂದು ಬೆಂಗಳೂರಿನಲ್ಲಿ ‘ವಿಜಯ ಸಿದ್ಧತಾ ಸಭೆ’ಯನ್ನು ನಡೆಸಲಿದೆ ಎಂದು ಕಾರ್ಕಳ ಶಾಸಕ, ಮಾಜಿ ಸಚಿವ ವಿ.ಸುನಿಲ್‌ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ವಿಜಯ ಸಿದ್ಧತಾ ಸಭೆ ಇಟ್ಟುಕೊಂಡಿದ್ದೇವೆ. ಬಿಜೆಪಿ ಈಗಾಗಲೇ ಚುನಾವಣಾ ಕಾರ್ಯತಂತ್ರ ವನ್ನು ರೂಪಿಸುತ್ತಿದೆ ಎಂದು ಅವರು ವಿವರಿಸಿದರು.

ವಿಜಯ ಸಿದ್ಧತಾ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಧ್ಯಕ್ಷರಾಗಿರುತ್ತಾರೆ. ಕೇಂದ್ರದಿಂದ ಅರುಣ್ ಸಿಂಗ್ ಭಾಗವಹಿಸಲಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ 54 ಮಂದಿ ಹಿರಿಯರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ವರೆಗೆ ಸಭೆ ನಡೆಯಲಿದೆ ಎಂದರು.

ಲೋಕಸಭಾ ಚುನಾವಣೆಯನ್ನು ಗೆಲ್ಲಲು ಎಲ್ಲಾ ತಯಾರಿ ಮಾಡಿಕೊ ಳ್ಳುತ್ತಿದ್ದೇವೆ. ಬಿಜೆಪಿ ಮುಂದಿರುವ ಸವಾಲು ಮತ್ತು ಕಾರ್ಯತಂತ್ರಗಳ ಚರ್ಚೆ ಈ ಸಭೆಯಲ್ಲಿ ನಡೆಯಲಿದೆ. ಅಭಿಯಾನಗಳು, ಕಾರ್ಯಕ್ರಮ, ಮೋದಿಯ ರ್ಯಾಲಿ ಬಗ್ಗೆ ಸಿದ್ಧತಾ ಸಭೆ ಚರ್ಚಿಸಲಿದೆ ಎಂದೂ ಅವರು ಹೇಳಿದರು.

ಕೇಂದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಮತವಾಗಿ ಪರಿವರ್ತಿಸುವ ಕಾರ್ಯತಂತ್ರ ನಡೆಯಲಿದೆ. ಬಿಜೆಪಿಗೆ 5 ಸೀಟು ಗೆಲ್ಲಲು ಬಿಡಲ್ಲ ಎಂದು ಹಿಂದೆ ಕಾಂಗ್ರೆಸ್ ಹೇಳಿತ್ತು. ಆದರೆ ಚುನಾವಣೆಯಲ್ಲಿ ಏನಾಯಿತು ಎಂದು ಪ್ರಶ್ನಿಸಿದ ಸುನಿಲ್, ದೇಶಕ್ಕೆ ಮೋದಿ ಬೇಕು ಎಂಬ ಜನಾಭಿಪ್ರಾಯ ಇದೆ. ಎಲ್ಲಾ ಕಾಲದಲ್ಲೂ ಕರ್ನಾಟಕದ ಜನ ಬಿಜೆಪಿ ಬೆಂಬಲಿಸಿದ್ದಾರೆ. ಮೂರನೇ ಬಾರಿಗೂ ಮೋದಿ ಯನ್ನು ಪ್ರಧಾನಿ ಮಾಡಲು ಕರ್ನಾಟಕದ ಜನ ನಿರ್ಧರಿಸಿದ್ದಾರೆ ಎಂದರು.

ಮುಖವಾಣಿಯೇ ಭ್ರಷ್ಚಾಚಾರ: ರಾಜ್ಯ ಸರಕಾರದ ಮುಖವಾಣಿಯೇ ಭ್ರಷ್ಟಾಚಾರ. ಅದರ ವರ್ಗಾವಣೆ ಭ್ರಷ್ಚಾಚಾರ, ಕಾರ್ಯಸೂಚಿ ಹಿಂದು ವಿರೋಧಿ ನೀತಿಯನ್ನು ಜನರ ಮನೆಗೆ ತಲುಪಿಸುತ್ತೇವೆ ಎಂದು ಸುನಿಲ್ ಕುಮಾರ್ ನುಡಿದರು.

ರಾಜ್ಯದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ವ ಜನರ ಸರಕಾರ ಅಲ್ಲ. ಅದು ರೈತ ವಿರೋಧಿ, ಕನ್ನಡ ವಿರೋಧಿ, ದಲಿತ ವಿರೋಧಿ, ಒಂದು ಕೋಮಿನ ಸರ್ಕಾರವಾಗಿದೆ. ಅನುದಾನಗಳನ್ನು ಬೇರೆ ಕಡೆ ಬಳಸಿದ ದಲಿತ ವಿರೋಧಿ ಸರಕಾರ. ರಾಜ್ಯದಲ್ಲಿ ಒಂದು ಕೋಮಿಗೆ ಬೇಕಾದ ಹೇಳಿಕೆ ನಡವಳಿಕೆ, ಅನುದಾನ ನೀಡುವ ಸರ್ಕಾರ ಇದೆ ಎಂದು ಅವರು ತಿಳಿಸಿದರು.

ಇಶ್ಯು ಮೇಲೆ ಹೋರಾಟ: ಕಳೆದ ಬಾರಿ ಪುಲ್ವಾಮಾ, ಈ ಬಾರಿ ರಾಮ ಎಂಬ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಯಾವ ಕಾಲಕ್ಕೆ ಯಾವ ಇಶ್ಯೂಗಳು ಬರುತ್ತೋ, ಅದನ್ನು ನಾವು ತೆಗೆದುಕೊಳ್ಳುತ್ತೇವೆ. ಈ ಬಾರಿ ಮೋದಿ ಸರಕಾರದ ಹತ್ತು ವರ್ಷಗಳ ಆಡಳಿತವನ್ನು ಜನತೆಗೆ ಮುಟ್ಟಿಸುತ್ತೇವೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಯಾವುದೇ ಅಸ್ತ್ರಗಳಿಲ್ಲ. ಕಾಂಗ್ರೆಸ್ ಚುನಾವಣೆಗೂ ಮುನ್ನ ಸೋಲನ್ನ ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿದೆ ಎಂದು ಅವರು ಲೇವಡಿ ಮಾಡಿದರು.

ನಿನ್ನೆ ಧರಣಿ ಕುಳಿತ ತಮ್ಮ ಪೋಟೊವನ್ನು ಕಾಂಗ್ರೆಸ್ ಕಾರ್ಯಕರ್ತರು ಎಡಿಟ್ ಮಾಡಿ ಪೋಸ್ಟ್ ಮಾಡಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುನಿಲ್‌ಕುಮಾರ್, ಈ ಬಗ್ಗೆ ಕಾಂಗ್ರೆಸ್ ವೈಯಕ್ತಿಕವಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ವೈಯಕ್ತಿಕ ಟೀಕೆಯಿಂದ ಹಿಂದೆ ಸರಿದು ವೈಚಾರಿಕವಾಗಿ ಹೋರಾಟ ಮಾಡಬೇಕು ಎಂದರಲ್ಲದೇ, ವೈಯಕ್ತಿಕ ಸುಳ್ಳು ನಿಂದನೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ ಎಂದರು.

ಪರಶುರಾಮ ಥೀಂ ಪಾರ್ಕ್ ವಿವಾದ: ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಪ್ರವಾಸೋದ್ಯಮ ಕೇಂದ್ರ ಆಗಬೇಕು ಎಂದು ನೂರು ಬಾರಿ ಹೇಳಿದ್ದೇನೆ. ಅದರಲ್ಲಿ ಲೋಪ ದೋಷವನ್ನು ಸರಿ ಮಾಡುವ ಹೊಣೆಗಾರಿಕೆ ಸರಕಾರದ್ದು. ಕಾಮಗಾರಿಯಲ್ಲಿ ಲೋಪದೋಷ ಆಗಿದ್ದರೆ ತನಿಖೆ ಮಾಡಿ ಎಂದು ನೂರು ಬಾರಿ ಹೇಳಿದ್ದೇನೆ. ತನಿಖೆಯನ್ನು ನಡೆಸುತ್ತಿಲ್ಲ ಯೋಜನೆಯನ್ನು ಮುಂದುವರಿಸುತ್ತಿಲ್ಲ . ಕೇವಲ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಬಿಜೆಪಿ ಸರಕಾರ ಬಿಡುಗಡೆ ಮಾಡಿದ ಹಣವನ್ನು ತಡೆಹಿಡಿಯಲಾಗಿದೆ. ಒಟ್ಟಿನಲ್ಲಿ ಯೋಜನೆ ಹಳ್ಳಹಿಡಿಸಿ ಬಿಜೆಪಿ ಕಾಲದ ಯೋಜನೆ ಜನಪ್ರಿಯ ಆಗಬಾರದು ಎಂಬುದು ಕಾಂಗ್ರೆಸ್ ಉದ್ದೇಶ ಎಂದು ಸುನಿಲ್‌ ಕುಮಾರ್ ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!