ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 90ನೇ ವಾರ್ಷಿಕ ಸರ್ವ ಸದಸ್ಯರ ಸಭೆ
ಮಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 90ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಶುಕ್ರವಾರ ನಗರ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಪತ್ರಕರ್ತರು ಸಮಾಜದ ಸಮಸ್ಯೆಗಳನ್ನು ತೆರೆದಿಡುವ ಪ್ರಯತ್ನ ನಡೆಸಬೇಕಾಗಿದೆ. ಅಲ್ಲದೆ ಸಮಾಜದಲ್ಲಿನ ಪಾಸಿಟಿವ್ ಸುದ್ದಿಗಳನ್ನು ಬೆಳಕಿ ತಂದು ಸಮಾಜಮುಖಿ ಕಾರ್ಯಗಳಲ್ಲಿ ಪತ್ರಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಮಂಗಳೂರಿನ ಪತ್ರಕರ್ತರು ರಾಜ್ಯಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಏನಾದದರೊಂದು ವಿಶೇಷ ಕಾರ್ಯಕ್ರಮ ಮಾಡುತ್ತಲಿರುತ್ತಾರೆ. ಕರಾವಳಿಯ ವಿಶೇಷ ವ್ಯಕ್ತಿಗಳನ್ನು ಗುರುತಿಸುವುದು, ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮ ಮೂಲಕ ಮಂಗಳೂರನ್ನು ರಾಜ್ಯಕ್ಕೆ ಮಾದರಿಯಾಗುವಂತೆ ತೋರಿಸಿಕೊಟ್ಟಿದ್ದಾರೆ. ಮಂಗಳೂರು ಪತ್ರಕರ್ತರ ಸಂಘ ಗುರುತಿಸಿದ ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಮಂಗಳೂರು ಪತ್ರಕರ್ತರ ಸಾಧನೆ ರಾಷ್ಟ್ರಮಟ್ಟ ತಲುಪಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ಯಾವುದೇ ಜವಾಬ್ದಾರಿ ವಹಿಸಿಕೊಂಡರೂ ಉತ್ತಮವಾಗಿ ನಿರ್ವಹಿಸುತ್ತದೆ. ಬ್ರ್ಯಾಂಡ್ ಮಂಗಳೂರು ಸೇರಿದಂತೆ ಪತ್ರಕರ್ತರ ಸಂಘದ ವಿವಿಧ ಕಾರ್ಯಕ್ರಮಗಳು ಅತ್ಯಂತ ಯಶಸ್ಸಾಗಿ ಜನಮಾನಸವನ್ನು ತಲುಪುತ್ತಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕ್ಯಾಲೆಂಡರ್ನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿಸಿ ಲೋಕೇಶ, ಉಪಾಧ್ಯಕ್ಷರಾದ ಪುಂಡಲಿಕ ಬಾಲಾಜಿ, ಅಜ್ಜಮಾಡು ರಮೇಶ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಕಾರ್ಯದರ್ಶಿ ಮತ್ತಿಕೆರೆ ಜಯರಾಮ, ಸೋಮಶೇಖರ ಕೆರಗೋಡು, ನಿಂಗಪ್ಪಚಾವಡಿ, ಖಜಾಂಜಿ ವಾಸುದೇವ ಹೊಳ್ಳ, ರಾಜ್ಯ ಕಾರ್ಯ ಸಮಿತಿ ಸದಸ್ಯರಾದ ಬಾಳ ಜಗನ್ನಾಥ ಶೆಟ್ಟಿ, ಇಬ್ರಾಹಿಂ ಅಡ್ಕಸ್ಥಳ, ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.