ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ ಇನ್ನಿಲ್ಲ

ಉಳ್ಳಾಲ, ಜ 06: ಕನ್ನಡ, ತುಳು ಭಾಷೆಯ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಸಂಶೋಧಕ, ಯಕ್ಷಗಾನ ಪ್ರಸಂಗಕರ್ತ ಅಮೃತ ಸೋಮೇಶ್ವರ (89) ಇಂದು ಬೆಳಗ್ಗೆ 9.15ಕ್ಕೆ ನಿಧನರಾಗಿದ್ದಾರೆ.

ಸೋಮೇಶ್ವರ ನಿವಾಸಿಯಾಗಿದ್ದ ಅಮೃತ ಸೋಮೇಶ್ವರ ಅವರು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕನ್ನಡ ಪ್ರಾಧ್ಯಾಪಕರಾಗಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ವೈವಿಧ್ಯಮಯ ಹಾಗೂ ವಿಸ್ತೃತವಾದ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. ಯಕ್ಷಗಾನದ ಬಗ್ಗೆ ವ್ಯಾಪಕ ಸಂಶೋಧನೆ, ಅಧ್ಯಯನ, ಆವಿಷ್ಕಾರ, ಕೃತಿರಚನೆ ಅವರ ಇನ್ನೊಂದು ಪ್ರಮುಖ ಕಾರ್ಯಕ್ಷೇತ್ರವಾಗಿತ್ತು.

ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆದಿದ್ದು ಕಥೆ, ಕವನಗಳ ರಚನೆಗೆ ತೊಡಗಿಸಿ ಕೊಂಡು ಯಕ್ಷಗಾನ ಪ್ರಸಂಗವೊಂದನ್ನೂ ರಚಿಸಿದ್ದರು. ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದರು.

ಅಮೃತ ಸೋಮೇಶ್ವರರ ತುಳುಭಾಷೆ ಹಾಗೂ ಕನ್ನಡ ಸಾಹಿತ್ಯ ಸೇವೆಗಾಗಿ ಸಂದ ಪುರಸ್ಕಾರಗಳು ಹಲವಾರು. ‘ತುಳುನಾಡ ಕಲ್ಕುಡೆ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಯಕ್ಷಗಾನ ಕೃತಿ ಸಂಪುಟ’ಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ‘ತುಳುಪಾಡ್ದನ ಕಥೆಗಳು’ ಕೃತಿಗೆ ಕೇಂದ್ರವಿದ್ಯಾ ಇಲಾಖೆಯ ಪ್ರಶಸ್ತಿ, ‘ತುಳುಪಾಡ್ದನ ಸಂಪುಟ’ಕ್ಕೆ ಕು.ಶಿ. ಹರಿವಾಸಭಟ್ಟ ಜಾನಪದ ಪ್ರಶಸ್ತಿ, ‘ಅಪಾರ್ಥಿನಿ’ ಕುಚೋದ್ಯ ಶಬ್ದ ಕೋಶಕ್ಕೆ ಆರ್ಯಭಟ ಪ್ರಶಸ್ತಿ, ಯಕ್ಷಗಾನದ ಕೊಡುಗೆಗಾಗಿ ‘ಪಾರ್ತಿಸುಬ್ಬ ಪ್ರಶಸ್ತಿ’ ಆಕಾಶವಾಣಿ ಬಹುಮಾನ, ತುಳು ಅಕಾಡಮಿ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಕಾರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಮುಲ್ಕಿಯಲ್ಲಿ ನಡೆದ ಅಖಿಲ ಭಾರತ ತುಳುಸಮ್ಮೇಳನದ ಅಧ್ಯಕ್ಷತೆ, ಮುಂಬಯಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ. ಜೊತೆಗೆ ಅಮೃತ್ ಸೋಮೇಶ್ವರ್ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವ ಸಹಾ ಸಂದಿದೆ.

ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದ ಅಮೃತೇಶ್ವರರು ತಾವು ಓದಿದ ಅಲೋಷಿಯಸ್‌ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಸೇರಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ದಿಂದ ಎಂ.ಎ. ಪದವಿ ಪಡೆದ ನಂತರ ಪುತ್ತೂರಿನ ಸೇಂಟ್‌ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡು 1993ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು.
ಯಕ್ಷಗಾನದಲ್ಲಿ ಪ್ರಸಂಗ ಕರ್ತೃವಿಗೆ ಸ್ವಾತಂತ್ರ್ಯ ಕಡಿಮೆಯೆ. ಆದರೂ ಕಲೆಯ ಮೂಲಕ ವೈಚಾರಿಕತೆಯನ್ನೂ ಪ್ರತಿಪಾದಿಸಿ ಯಕ್ಷಗಾನ ಪ್ರಸಂಗಗಳಿಗೆ ಹೊಸ ಆಯಾಮ ನೀಡಿದರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆದಿದ್ದು ಕಥೆ , ಕವನಗಳ ರಚನೆಗೆ ತೊಡಗಿಕೊಂಡು ಯಕ್ಷಗಾನ ಪ್ರಸಂಗವೊಂದನ್ನೂ ರಚಿಸಿದ್ದರು. ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದು, ಪಾತ್ರಗಳ ರಚನೆಯಲ್ಲಿ ಹೊಸತನ ತುಂಬಿದ್ದರಿಂದ ಪ್ರಸಿದ್ಧ ಮೇಳಗಳಿಂದ ಯಕ್ಷಗಾನ ಕೃತಿಗಳಿಗೆ ನಿರಂತರ ಬೇಡಿಕೆ ಬಂತು. ‘ಯಕ್ಷಗಾನ ಕೃತಿ ಸಂಪುಟ’ ಇವರ ಜಾನಪದ ಯಕ್ಷಗಾನ ಸಂಶೋಧನೆಯ ಫಲವಾಗಿ ಮೂಡಿಬಂದ ಬಹು ಮೌಲಿಕ ಕೃತಿ.

Leave a Reply

Your email address will not be published. Required fields are marked *

error: Content is protected !!