ಶಾಲಾ ವಾಹನಗಳ ಚಾಲಕ, ಸಹಾಯಕರಿಗೆ ‘ಸನ್ನಡತೆಯ ಪ್ರಮಾಣ ಪತ್ರ ಕಡ್ಡಾಯ’ -ಶಿಕ್ಷಣ ಇಲಾಖೆ
ಬೆಂಗಳೂರು: ಶಾಲಾ ಮಕ್ಕಳನ್ನು ಕರೆತರುವ ಎಲ್ಲ ಬಗೆಯ ವಾಹನಗಳ ಚಾಲಕರು ಮತ್ತು ಸಹಾಯಕರು ಪೊಲೀಸರಿಂದ ಪಡೆದ ಸನ್ನಡತೆಯ ಪ್ರಮಾಣಪತ್ರ ಶಾಲೆಗಳಿಗೆ ಸಲ್ಲಿಸಬೇಕು. ಶಾಲಾ ಆಡಳಿತ ಮಂಡಳಿ ಅದನ್ನು ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ಸಿಸ್ಟಂ (ಎಸ್ಟಿಎಸ್) ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಎರಡು ವರ್ಷಗಳಿಗೊಮ್ಮೆ ಈ ಪ್ರಮಾಣಪತ್ರಗಳನ್ನು ನವೀಕರಿಸಬೇಕು. ಶಾಲಾ ವಾಹನಗಳನ್ನು ನಿರ್ವಹಿಸುವ ಚಾಲಕರು ಮತ್ತು ಸಹಾಯಕರು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕರೆತಂದಾಗ ಮತ್ತು ಮಕ್ಕಳನ್ನು ಮನೆಗಳಿಗೆ ಬಿಟ್ಟ ನಂತರ ಶಾಲೆಗೆ ವಾಪಸ್ ಬಂದು, ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿಯೇ ಹಾಜರಾತಿ ಪುಸ್ತಕಕ್ಕೆ ಕಡ್ಡಾಯವಾಗಿ ಸಹಿ ಹಾಕಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಖಾಸಗಿ ಶಾಲಾ ವಾಹನಗಳಲ್ಲಿ, ಬಸ್, ವ್ಯಾನ್, ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆತರುವ ಕೆಲಸವನ್ನು ನಿರ್ವಹಿಸಲು ಸಹಾಯಕರಾಗಿ ಮಾಹಿಳಾ ಸಹಾಯಕರನ್ನು ನೇಮಿಸಿಕೊಳ್ಳಬೇಕು. ಪ್ರತಿ ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮಾರ ಅಳವಡಿಸಬೇಕು. ಶಾಲಾ ವಾಹನಗಳಲ್ಲಿ ನಿಗಧಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಸಾರಿಗೆ ಸೇವೆಗಳಿಗಾಗಿ ಶಾಲೆಗಳು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಆಯಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಜವಾಬ್ದಾರಿಯಾಗಿ ದ್ದು, ಶಾಲೆಗಳಿಗೆ ಭೇಟಿ ನೀಡಿ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕು. ಶಾಲಾ ಆಡಳಿತ ಮಂಡಳಿಗಳು ವಿವರಗಳನ್ನು ಪ್ರತಿ ವರ್ಷ ಬಿಇಒಗಳಿಗೆ ನೀಡಬೇಕು ಎಂದು ಸೂಚಿಸಿದೆ.