ನಿಟ್ಟೆ: ವಿಶ್ವ ಹಿರಿಯ ವಿದ್ಯಾರ್ಥಿಗಳ ಸಭೆ
ನಿಟ್ಟೆ ಪರಿಗಣೆತ ವಿಶ್ವವಿದ್ಯಾಲಯದ ಅಧೀನ ಸಂಸ್ಥೆ ಡಾ.ನಿಟ್ಟೆ ಶಂಕರ ಅಡ್ಯಂತಾಯ ಪ್ರಥಮ ದರ್ಜೆ ಕಾಲೇಜು ಹಾಗೂ ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ವಿಶ್ವ ಹಿರಿಯ ವಿದ್ಯಾರ್ಥಿಗಳ ಸಭೆ – 2023 ಇತ್ತೀಚೆಗೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಉದ್ಯಮಾಡಳಿತ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ನಿಟ್ಟೆ ಸಂಕೀರ್ಣದ ನಿರ್ವಹಣೆ ಮತ್ತು ಅಭಿವೃದ್ಧಿ ನಿರ್ದೇಶಕ ಪ್ರೊ.ಎ.ಯೋಗೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ, ನಿಟ್ಟೆ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮೊಗೆರಾಯ, ವಿದ್ಯಾರ್ಥಿ ಕಲ್ಯಾಣ ಹಾಗೂ ಹಳೆ ವಿದ್ಯಾರ್ಥಿಗಳ ಸಂಬಂಧಿತ ಅಧಿಕಾರಿ ಪ್ರಸನ್ನ ಕೈಲಾಜೆ ಉಪಸ್ಥಿತರಿದ್ದರು. ಪೂರ್ವ ವಿದ್ಯಾರ್ಥಿನಿ ಅನುರಾಧಾ ಭಟ್ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದರ್ವಿಶ್ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ವೀಣಾ ಬಿ.ಕೆ ಸಂಸ್ಥೆಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಸ್ತಾವನೆಗೈದರು. ಮುಖ್ಯ ಅತಿಥಿ ನಿಟ್ಟೆ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮೊಗೆರಾಯರು ಸಂಸ್ಥೆಯ ಅಭಿವೃದ್ಧಿಯಲ್ಲಿ ಪೂರ್ವ ವಿದ್ಯಾರ್ಥಿಗಳು ಸಹಕರಿಸುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾಗಿ ಸೇರಿ ವಿಶ್ವವಿದ್ಯಾಲಯದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಪ್ರಸ್ತುತ ಉಪಕುಲಪತಿಗಳಾಗಿರುವ ಡಾ. ಎಂ.ಎಸ್ ಮೂಡಿತ್ತಾಯರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮೂಡಿತ್ತಾಯರು ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಜೊತೆ ಅವಿನಾಭಾವ ಸಂಬಂಧವನ್ನು ಬೆಳೆಸಿ ಕೊಳ್ಳುವುದರ ಮೂಲಕ ಸಂಸ್ಥೆಯ ಬೆಳವಣಿಗೆಗೆ ಪ್ರೇರಣೆಯಾಗುವಂತೆ ಸಲಹೆಯಿತ್ತರು. ಕಾರ್ಯಕ್ರಮದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿರುವ ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿಶ್ವದೆಲ್ಲೆಡೆ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದ ಬಳಿಕ ಹಿರಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಸ್ನೇಹ ಮಿಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹಾಯಕ ಗ್ರಂಥಪಾಲಕ ಸತೀಶ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಸುಧೀರ್ ಎಂ.ವಂದಿಸಿದರು. ಪ್ರೊ.ರಾಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಡಾ. ದಯಾನಂದ ಬಾಯಾರ್, ಅರ್ಚನಾ ಭಟ್ ಹಾಗೂ ಇತರರು ಸಹಕರಿಸಿದರು.