ಕಲುಷಿತಗೊಳ್ಳುತ್ತಿರುವ ಯುವ ಮನಸುಗಳನ್ನು ಶುದ್ಧವಾಗಿಸುವುದೇ ಇಂದಿನ ಸವಾಲು

ಉದ್ಯಾವರ: ಇಂದಿನ ಯುವ ಮನಸ್ಸುಗಳು ಬೇರೆ ಬೇರೆ ಕಾರಣಗಳಿಂದ ಕಲುಷಿತಗೊಂಡಿರುತ್ತದೆ. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಕಥೆಗಳಿಂದ, ರಾಜಕೀಯ ವ್ಯಕ್ತಿಗಳ ಬಣ್ಣ ಬಣ್ಣದ ಮಾತುಗಳಿಂದ ಧರ್ಮ ಧರ್ಮಗಳ ಬಗ್ಗೆ ಅಪನಂಬಿಕೆಗಳನ್ನು ಬೆಳೆಸಿ ಕೊಂಡು. ಪರಸ್ಪರ ಅನುಮಾನದಿಂದ ನೋಡುವಂತಹ ವಾತಾವರಣ ಇಲ್ಲಿ ಇದೆ. ಈ ನೆಲದ ಸೌಹಾರ್ದತೆಯನ್ನು ಬಯಸುವ ಮಂದಿಗೆ ಇರುವ ಚಾಲೆಂಜ್ ಏನೆಂದರೆ ಇಂತಹ ಕಶ್ಮಲ ತುಂಬಿರುವ  ಯುವ ಮನಸುಗಳನ್ನ ಶುದ್ಧವಾಗಿಸುವುದು.

ಇದು ಸಮಾರಂಭ, ಸಭೆ, ಭಾಷಣಗಳಿಂದ ಮಾಡಲು ಸಾಧ್ಯವಿಲ್ಲ, ಸೌಹಾರ್ದತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಮಕ್ಕಳಿಗೆ, ಯುವ ಜನತೆಗೆ ತೋರಿಸಿದಾಗ ಯುವ ಸಮುದಾಯವು ಆರೋಗ್ಯವಂತ ಮನಸ್ಸುಗಳನ್ನ ಪಡೆದುಕೊಳ್ಳಬಹುದು. ನಮ್ಮ ನಾಳೆಗಳನ್ನ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಯುವ ಸಮುದಾಯದ ಮೇಲಿದೆ ಎಂದು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶಯದಲ್ಲಿ ಜರಗಿದ 50ನೇ ವರ್ಷದ ಡಿಸೆಂಬರ್ ತಿಂಗಳ ಕಾರ್ಯಕ್ರಮವಾದ “ಯುವ ನಡೆ ಸೌಹಾರ್ದತೆಯಡೆ”- ಒಂದು ಸಂವಾದ  ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವ ಬರಹಗಾರರಾದ ಮಹಮ್ಮದ್ ಶಾರೂಕ್, ಓಸ್ಕರ್ ಲುವಿಸ್, ಸಚಿನ್ ಅಂಕೋಲ ಅಭಿಪ್ರಾಯ ಪಟ್ಟರು.

ನಮ್ಮ ಹಿರಿಯರ ಕಾಲದಲ್ಲಿ ಕೊಡುಕೊಳ್ಳುವಿಕೆಯಲ್ಲಿ ಯಾವುದೇ ಧರ್ಮ ಅಡ್ಡಿ ಬರುತ್ತಿದ್ದಿಲ್ಲ .ಅಲ್ಲೊಂದು ಮಾನವೀಯತೆ ,ಸೌಹಾರ್ದತೆ ಗಟ್ಟಿಯಾಗಿತ್ತು .ಆದರೆ ಇಂದಿನ ದಿನಮಾನದಲ್ಲಿ ಅದು ಶಿಥಿಲವಾಗುತ್ತಿದೆ. ಧರ್ಮ ಧರ್ಮಗಳ ಮಧ್ಯೆ ಅಪನಂಬಿಕೆ ತಲೆ ಎತ್ತುತ್ತಿದೆ ಧರ್ಮಗಳ ಮಧ್ಯೆ ಕಂದಕಗಳನ್ನು ಶಾಶ್ವತವಾಗಿರಿಸುವ ಪ್ರಯತ್ನ ನಮ್ಮ ರಾಜಕಾರಣಿಗಳಿಂದ ಆಗುತ್ತಿದೆ. ಆಜುಬಾಜುನ ನಮ್ಮ ಜಿಲ್ಲೆಗಳ ಬಗ್ಗೆ ಹೊರ ಜಿಲ್ಲೆಗಳಲ್ಲಿ ಕೆಟ್ಟ ಅಭಿಪ್ರಾಯವಿದೆ. ಆದರೆ ವಸ್ತು ಸ್ಥಿತಿ ಹಾಗಿಲ್ಲ ಕೆಲವು ಘಟನೆಗಳು  ನಡೆದಿದ್ದರೂ ಇಲ್ಲಿನ ಸೌಹಾರ್ದತೆ ಗಟ್ಟಿಯಾಗಿದೆ. ಇದು ಮಾಧ್ಯಮಗಳು ಘಟನೆಯನ್ನು ವೈಭವೀಕರಿಸಿದ ಪರಿಣಾಮ ಇದು.

ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಲು ಧಾರ್ಮಿಕ ವಿಭಜನೆಯ ಕೆಲಸವನ್ನು ಮಾಡುತ್ತಾರೆ. ನಾವು ದ್ವೀಪಗಳಾಗದೆ ಒಂದಾಗಿ ಬದುಕಿದರೆ ಇದು ವಿಫಲಗೊಳಿಸಬಹುದು. ಈ ಮೂಲಕ ನಮ್ಮ ನೆಲದ ಸೌಹಾರ್ದತೆಯನ್ನು ಗಟ್ಟಿಗೊಳಿಸಬಹುದು. ಸೌಹಾರ್ದತೆಯ ಹೆಸರಲ್ಲಿ ಟೋಪಿ ಹಾಕಿ ಕೊಂಡು ಮಸೀದಿಗೆ ಹೋಗುವುದು, ಹಣೆಗೆ ಗಂಧ ಹಾಕಿ ಕೊಂಡು ದೇವಸ್ಥಾನಕ್ಕೆ ಹೋಗೋದು . ಶಿಲುಬೆ ಹಾಕಿ ಕೊಂಡು ಚರ್ಚ್ಗೆ ಹೋಗೋದು ಅನ್ಯದರ್ಮಿಯರು ಮಾಡುವುದರಿಂದ ಏನು ಉಪಯೋಗವಿಲ್ಲ.  ಎಂದು ಈ ದಿನ ಡಾಟ್ ಕಾಮ್ ನ ಉಡುಪಿ ಪ್ರತಿನಿಧಿಗಳಾದ ಶ್ರೀ ಮಹಮ್ಮದ್ ಶಾರೂಕ್ ರವರು ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮತ್ತೋರ್ವ ಸಂಪನ್ಮೂಲ ವ್ಯಕ್ತಿ, ಯುವ ಬರಹಗಾರರಾದ ಯುವ ಬರಹಗಾರರಾದ ಓಸ್ಕರ್ ಲುವಿಸ್ ಅವರು ಮಾತನಾಡಿ ಒಂದು ರೀತಿಯಲ್ಲಿ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆ, ಕೋಮುವಾದದ ಪ್ರಯೋಗಶಾಲೆ ಆದರೂ ಇಲ್ಲಿನ ಸೌಹಾರ್ದತೆ ಗಟ್ಟಿಯಾಗಿ ನೆಲೆ ನಿಂತಿದೆ .ಎಂದರೆ ಅದಕ್ಕೆ ಕಾರಣ ಈ ಮಣ್ಣಿನ ಶಕ್ತಿ .ನನ್ನ ಬಾಲ್ಯದಲ್ಲಿ ನಾನು

ಮುಸ್ಲಿಂ ,ಹಿಂದೂ ಗೆಳೆಯರೊಂದಿಗೆ ಕ್ರಿಸ್ಮಸ್ ,ದೀಪಾವಳಿ, ರಂಜಾನ್ ಆಚರಿಸುತ್ತಿದ್ದೆವು ನಾವು ನಮ್ಮ ನಮ್ಮ ಹಬ್ಬಗಳ ಮರುದಿನ ಶಾಲೆಗೆ ಬುತ್ತಿಯಲ್ಲಿ ಮನೆಯಿಂದ ಊಟ ತಿಂಡಿಗಳನ್ನು ತರುತ್ತಿದ್ದೆವು, ಮತ್ತು ಯಾರ ಪರವಾನಿಗೆ ಇಲ್ಲದೆ ಕೈ ಹಾಕಿ ತಿನ್ನುತ್ತಿದ್ದೆವು, ಆದರೆ ಈಗ ಹಿಂತಿರುಗಿ ನೋಡಿದಾಗ ಅಂತ ಪರಿಸ್ಥಿತಿ ಇದೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸ ಬೇಕಾಗಿದೆ .ಹಬ್ಬಗಳನ್ನು ನಾವು ವಿಭಜಿಸಿ ಬಿಟ್ಟಿದ್ದೇವೆ .ಸಾಮರಸ್ಯ ಕೆಡಲು ನಾವು ಹಾಕಿದ ಮೊದಲ ಹೆಜ್ಜೆ ಇದು.ಅಮರನಿಗೆ ದೀಪಾವಳಿ, ರಹೀಮನಿಗೆ ರಂಜಾನ್ ,ಅಂತೋನಿಗೆ ಕ್ರಿಸ್ಮಸ್ ಹೀಗೆ  ಈ ಆಚರಣೆಗಳು   ಒಂದಾದರೆ ಖಂಡಿತ ಸಾಮರಸ್ಯ ಉಳಿಯುತ್ತದೆ.   ಹಾಗಂತ ಈ ಹಬ್ಬಗಳ ಹೊತ್ತಿಗೆ ಸೌಹಾರ್ದ ಹಬ್ಬಗಳನ್ನು ಆಚರಿಸುವುದರಿಂದ   ಸೌಹಾರ್ದತೆ ನೆಲೆಗೊಳಿಸಲು ಸಾಧ್ಯವಿಲ್ಲ. ವೈಯಕ್ತಿಕವಾಗಿ ಅತ್ಯಂತ ಕೋಮುವಾದಿಯಾಗಿರುವ ವ್ಯಕ್ತಿಗಳನ್ನು ಕರೆಸಿಕೊಂಡು ಇಂತಹ ಅಣುಕು  ಸೌಹಾರ್ದತಾ ಸಭೆಗಳನ್ನು ಮಾಡುವುದರಿಂದ ಏನೂ ಉಪಯೋಗವಿಲ್ಲ. ಪ್ರತಿ ಧರ್ಮದ ಆಚರಣೆ ,ವಸ್ತ್ರಸಹಿತೆಯನ್ನು ನಾವು ಗೌರವಿಸಿದಾಗ ಸೌಹಾರ್ದತೆ ತನ್ನಿಂದ ತಾನೇ ನೆಲೆ ನಿಲ್ಲುತ್ತದೆ ವಿನಹ ವೇದಿಕೆಯ ಮೇಲೆ ತೋರಿಕೆಗೆ ಬೈಬಲ್ ,ಕುರಾನ್, ಗೀತೆಗಳ ಶ್ಲೋಕಗಳನ್ನು ಕಂಠಪಾಠ ಮಾಡಿ ಹೇಳುವುದರಿಂದಲ್ಲ.  ಮುಂದಿನ ಯುವಪೀಳಿಗೆ ವ್ಯಾಟ್ಸಪ್ ಯೂನಿವರ್ಸಿಟಿಯಿಂದ ಹೊರಬಂದು ವೈಚಾರಿಕ ಮನೋಭಾವವನ್ನು  ಬೆಳೆಸಿ ಕೊಳ್ಳದಿದ್ದರೆ  ಮುಂದೊಂದು ದಿನ ಸೌಹಾರ್ದತೆ ಅನ್ನೋದು ವಸ್ತು ಸಂಗ್ರಹಾಲಯದಲ್ಲಿ ಇರುವ ಆ್ಯಂಟಿಕ್ ಪೀಸ್ ಗಳಾಗುತ್ತದೆ ಎಂದರು 

ನಟ ಕವಿ ಯುವ ಬರಹಗಾರದ ಸಚಿನ್ ಅಂಕೋಲ  ಅವರು ಮಾತನಾಡುತ್ತಾ ನಾನು  ಮಾತು ಪ್ರಾರಂಭಿಸುವಾಗಲೇ ಅತ್ಯಂತ ಖೇದದಿಂದ ಮತ್ತು ಹಿಂಜರಿಕೆಯಿಂದ ಪ್ರಾರಂಭಿಸುತ್ತಿದ್ದೇನೆ ಯಾಕೆಂದರೆ ನನಗೆ ಶಾರುಕ್  ಓಸ್ಕರ್ ಅವರ ಹಾಗೆ ಸಲೀಸಾಗಿ ಮಾತಾಡಲು ಸಾಧ್ಯವಿಲ್ಲ .ಏಕೆಂದರೆ ನಾನು ಶೋಷಕರ ಧರ್ಮದಲ್ಲಿ ಅಪ್ಲಿಕೇಷನ್ ಹಾಕದೆ ಹುಟ್ಟಿದ್ದೇನೆ. ಈ ಕಾಲಮಾನದಲ್ಲಿ ಸೌಹಾರ್ದತೆಯ ಬಗ್ಗೆ ಮಾತಾಡುವವರದ್ದು ಒಂದು ಅಲ್ಪಸಂಖ್ಯಾತ ಗುಂಪು. ಮಾತುಗಳು ಇಂದಿನ ಸಮಾಜದಲ್ಲಿ ವ್ಯತಿರಿಕ್ತ ಅರ್ಥವನ್ನು ಕೊಡಬಹುದು. ಮತ್ತು ನಾವು ದೇಶ ಧರ್ಮ, ದ್ರೋಹಿಗಳಾಗಿ ಬಿಂಬಿತವಾಗಬಹುದು, ಸೌಹಾರ್ದತೆ ನಮ್ಮ ಕರಾವಳಿಯಲ್ಲಿ ಹೊಸತಲ್ಲ ನಮ್ಮ ಆಚರಣೆಗಳು ನಮ್ಮ ಸೌಹಾರ್ದತೆ ನೆಲೆಯನ್ನು ಗಟ್ಟಿಗೊಳಿಸಿದೆ. ನಮ್ಮ ಹಿರಿಯರು ಬದುಕಿದ ಪರಿ ಇದು ಇದು ಆದರೆ ಇಂದು ಶಿಥಿಲವಾಗುತ್ತಿದೆ. ಯಾವ ಯುವಜನತೆ ಬಗ್ಗೆ ನಾನು ಮಾತಾಡೋದು? ಒಂದು ಸಮುದಾಯವನ್ನು ದ್ವೇಷಿಸುವ ಅವರ ಬಗ್ಗೆ ತಪ್ಪು ಕಲ್ಪನೆಯನ್ನು ಇಟ್ಟುಕೊಂಡು ವರ್ತಿಸುವ ಯುವಸಮುದಾಯದ ಬಗ್ಗೆಯೇ? ನಮ್ಮ ಓದು, ಉದ್ಯೋಗ, ಭವಿಷ್ಯ ಅನ್ನದ ಬಗ್ಗೆ ಮಾತಾಡದೇ   ಹಿಜಾಬ್ ಲವ್ ಜಿಹಾದ್ , ಹಲಾಲ್ ಕಟ್, ಜಟ್ಕಕಟ್ ಗಳ ಬಗ್ಗೆ ಮಾತಾಡುವ ಯುವಸಮುದಾಯದ ಬಗ್ಗೆ ಮಾತಾಡಬೇಕೋ?  ನನಗೆ ಗೊತ್ತಾಗುವುದಿಲ್ಲ. ಕರಾವಳಿಯಲ್ಲಿ ಮೊದಲಿಂದಲೂ ಸಾಮರಸ್ಯ ಇದ್ದುದರಿಂದಲೇ ಬೇರೆ ಜಿಲ್ಲೆಗೆ ಹೋಲಿಸಿದರೆ ಕರಾವಳಿ ಅಭಿವೃದ್ಧಿ ಡಾಳಾಗಿ ಕಾಣುತ್ತದೆ. ಅದು ಹಿನ್ನಡೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವ ಜನತೆಯ ಮೇಲಿದೆ . ಒಂದು ದೇಶವನ್ನು ಕಟ್ಟುವುದು ಮತ್ತು ಕೆಡಹುವುದು ಯುವಸಮುದಾಯವೇ ಆಗಿದೆ. ಹಾಗಾಗಿ ದೇಶವನ್ನು ಕೆಡವ ಹೊರಟವು ಸಮುದಾಯವನ್ನು ತೆಕ್ಕೆಗೆ ತೆಗೆದುಕೊಂಡು ದೇಶ ಕಟ್ಟುವ ಕಾಯಕದಲ್ಲಿ ಅವರನ್ನು ತೊಡಗಿಸಬೇಕು ಎಂದರು .

ಡಾ. ಫೈಸಲ್, ಪ್ರತಾಪ್ ಕುಮಾರ್, ನಾದ ಮಣಿನಾಲ್ಕೂರು ಮೊದಲಾದವರು ನಂತರ ಜರಗಿದ ಸಂವಾದದಲ್ಲಿ ಪಾಲ್ಗೊಂಡರು, ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ತಿಲಕ್ ರಾಜ್ ಅವರು ಸ್ವಾಗತಿಸಿದರು. ಗೌರವ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ  ವಂದಿಸಿದರು. ನಿರ್ದೇಶಕರಾದ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!