ಶ್ರೀರಾಮ ಜನ್ಮಭೂಮಿ ಅಯ್ಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ
ಕುಂದಾಪುರ: ಶ್ರೀರಾಮ ಜನ್ಮಭೂಮಿ ಅಯ್ಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಡಿ.31ರಂದು ಬೆಳಿಗ್ಗೆ ವಕ್ವಾಡಿ ಪಂಚಾಯತ್ ಸರ್ಕಲ್ ವಠಾರದಿಂದ ಭವ್ಯ ಮೆರವಣಿಗೆ ಮೂಲಕ ವಕ್ವಾಡಿ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಳಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದರ ಅಂಗವಾಗಿ ಜ.1 ರಿಂದ 15ರ ತನಕ ಪ್ರತಿಯೊಂದು ಮನೆ ಮನೆಗೆ ಮಂತ್ರಾಕ್ಷತೆ, ಕರಪತ್ರ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಜ.07 ರಂದು ಮಹಾ ಸಂಪರ್ಕ ಅಭಿಯಾನ ದಿನ, ಜ.22 ರಂದು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಂದು ಎಲ್ಲರೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ರ ತನಕ ಶ್ರೀರಾಮನಾಮ ಭಜನೆ, ಪ್ರಾರ್ಥನೆ, ಪೂಜೆ ಕಾರ್ಯಕ್ರಮ ನಡೆಸಬೇಕು. ಸಂಜೆ 5ಕ್ಕೆ ಪ್ರತಿ ಮನೆಯ ಬಾಗಿಲ ಮುಂದೆ 5 ದೀಪಗಳನ್ನು ಉತ್ತರಕ್ಕೆ ಮುಖಮಾಡಿ ಹಚ್ಚಬೇಕು ಎಂದು ಕಾರ್ಯಕ್ರಮದ ಬಗ್ಗೆ ಜಿಲ್ಲಾ ಸಂಚಾಲಕರಾದ ಸುರೇಂದ್ರರವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಂತ್ರಾಕ್ಷತೆಯನ್ನು ಪ್ರತಿ ಮನೆ ಮನೆಗೂ ತಲುಪಿಸುವಂತೆ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಪುರೋಹಿತರಾದ ಸುಬ್ರಹ್ಮಣ್ಯ ಐತಾಳ್, ಅರ್ಚಕ ಶಿವ ಶಂಕರ್ ಐತಾಳ್, ಕೀರ್ತಿ ಶೆಟ್ಟಿ ಉಪಸ್ಥಿತರಿದ್ದರು. ಸತೀಶ್ ಪೂಜಾರಿ ಸ್ವಾಗತಿಸಿ, ನಿರೂಪಿಸಿದರು.
ಅರ್ಚಕರಾದ ಗಿರೀಶ್ ಐತಾಳ್ ಮಂತ್ರಾಕ್ಷತೆ ಕುರಿತು ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸಮಸ್ತ ಗ್ರಾಮಸ್ಥರು ಹಾಜರಿದ್ದು ಮಂತ್ರಾಕ್ಷತೆಯನ್ನು ಬರಮಾಡಿಕೊಂಡರು.