ಮರಗಳ್ಳತನ ಆರೋಪ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಬಂಧನ

ಬೆಂಗಳೂರು: ಮರಗಳನ್ನು ಅಕ್ರಮವಾಗಿ ಕಡಿದು ಅವುಗಳನ್ನು ಸಾಗಾಣಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನ ಹಳ್ಳಿಯ ಸರ್ಕಾರಿ ಜಮೀನಿನಲ್ಲಿದ್ದ 126 ಮರಗಳನ್ನು ಅಕ್ರಮವಾಗಿ ಕಡಿದ ಆರೋಪ ವಿಕ್ರಂ ಮೇಲಿತ್ತು.

ಬೇಲೂರು ತಹಶೀಲ್ದಾರ್ ಮಮತಾ ಅವರ ವರದಿ ಮೇರೆಗೆ ಡಿ.16ರಂದು ಅರಣ್ಯ ಇಲಾಖೆಗೆ ಮರ ಕಡಿದ ವಿಷಯ ಗೊತ್ತಾಗಿತ್ತು. ಶುಂಠಿ ಕೃಷಿ ಮಾಡಲು ಮರಗಳನ್ನು ಕಡಿಯಲಾಗಿದೆ ಎಂದು ತಹಶೀಲ್ದಾರ್ ಹೇಳಿದ್ದರು. ನಂತರ ಅವರು ತಲೆಮರೆಸಿಕೊಂಡಿದ್ದರು. ವಿಕ್ರಮ್ ಸಿಂಹ  ಆರಂಭದಲ್ಲಿ ತನಿಖಾ ಅಧಿಕಾರಿ ಮುಂದೆ ಹೇಳಿಕೆಗೆ ಹಾಜರಾಗಿದ್ದರು ಆದರೆ ಹೆಚ್ಚಿನ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. 

ವಿಕ್ರಮ್ ಸಿಂಹ ಅವರಿಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಇರುವ ಮಾಹಿತಿ ಪಡೆದ ಅಧಿಕಾರಿಗಳು, ಅವರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲೇ ಇರುವ ಜಾರುಬಂಡೆ ಕಾವಲ್‌ನಲ್ಲಿರುವ ಅರಣ್ಯ ಕೇಂದ್ರದಲ್ಲಿ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ಆನಂತರ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಸದ್ಯ ಅವರನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಕೇಂದ್ರದಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಬಿರಾದಾರ್ ಮತ್ತು ಎಸಿಪಿ ಬೆಂಗಳೂರು ನೇತೃತ್ವದ ಜಂಟಿ ತಂಡವು ವಿಕ್ರಮ್ ಸಿಂಹನನ್ನು ಬೆಂಗಳೂರಿನಲ್ಲಿ ಬಂಧಿಸಿದೆ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಆರೋಪದಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ ಮೋಹನ್ ಕುಮಾರ್ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!