ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡುವುದು ಕಂಡು ಬಂದಲ್ಲಿ ಕ್ರಮ- ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳಲ್ಲಿ ಬಾಡಿಗೆ ಆಧಾರದ ಮೇಲೆ ಸಾರ್ವಜನಿಕರನ್ನು ಸಾಗಾಣಿಕೆ ಮಾಡುವುದು ಕಂಡು ಬಂದಲ್ಲಿ ಆರ್.ಟಿ.ಓ ಹಾಗೂ ಪೊಲೀಸ್ ಇಲಾಖೆಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ತಿಳಿಸಿದರು.

ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕ/ಮಾಲಕರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಸಾರ್ವಜನಿಕರ ಸಾಗಾಣಿಕೆಯ ಖಾಸಗಿ ವಾಹನಗಳಲ್ಲಿ ಬಾಡಿಗೆ ಪಡೆದು ಸಂಚರಿಸುತ್ತ ಇರುವುದು ಹೆಚ್ಚು ಕಂಡು ಬರುತ್ತಿದೆ. ಇದರಿಂದ ಸರಕಾರಕ್ಕೆ ತ್ರೈಮಾಸಿಕ ತೆರಿಗೆ ವಂಚನೆ ಆಗುವುದರ ಜೊತೆಗೆ ಅದನ್ನೇ ನಂಬಿ ಟ್ಯಾಕ್ಸಿ ಚಾಲಕರಿಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ ಅಂತಹ ವಾಹನಗಳಲ್ಲಿ ಚಾಲನೆ ಮಾಡುತ್ತಿರುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಮತ್ತು ಆರ್.ಟಿ.ಓ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಆಟೋ ಚಾಲಕರು ರಹದಾರಿ ಪಡೆದ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಡಿಗೆಗೆ ವಾಹನವನ್ನು ಚಾಲನೆ ಮಾಡಬಹುದಾಗಿದ್ದು, ಇವರು ತಮ್ಮ ಕ್ಷೇತ್ರ ವ್ಯಾಪ್ತಿ ಬಿಟ್ಟು ಚಾಲನೆ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಆಟೋ ಚಾಲಕರು ಸಾರ್ವಜನಿಕರನ್ನು ಬಾಡಿಗೆ ಆಧಾರದಲ್ಲಿ ಕರೆದೊಯ್ಯುವಾಗ ತಪ್ಪದೇ ಮೀಟರ್ ಆಧಾರದ ಮೇಲೆ ಬಾಡಿಗೆಯನ್ನು ಪಡೆಯಬೇಕು. ಕನಿಷ್ಠ ದರ ಒಂದುವರೆ ಕಿಲೋಮೀಟರ್ ಗೆ 40 ರೂಪಾಯಿಗಳು ನಂತರದ ಒಂದು ಕಿಲೋಮೀಟರ್ ಗೆ 20 ರೂಪಾಯಿಗಳು ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಒಂದುವರೆ ಪಟ್ಟು ಶುಲ್ಕ ಪಡೆಯಬಹುದಾಗಿದೆ. ಒಂದೊಮ್ಮೆ ಹೆಚ್ಚು ಶುಲ್ಕ ಪಡೆದರೆ ಕ್ರಮ ಕೈಗೊಳ್ಳಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಶೋಧ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಆಟೋ ಚಾಲಕರನ್ನು ಕಾರ್ಮಿಕರ ವ್ಯಾಪ್ತಿಗೆ ಸೇರಿಸಿ ಕಾರ್ಮಿಕ ಇಲಾಖೆಯಿಂದ ನೀಡುತ್ತಿರುವ ಸರಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು. ನಗರಸಭಾ ವ್ಯಾಪ್ತಿಯ 35 ವಾರ್ಡ್ ಗಳ ವ್ಯಾಪ್ತಿಯಲ್ಲಿ ಬರುವ ಉಡುಪಿ ಸಾರಿಗೆ ಪ್ರಾಧಿಕಾರದ ನಿಯಮದನ್ವಯ ವಲಯ -1 ರ ಪರವಾನಿಗೆ ಹೊಂದಿದ ರಿಕ್ಷಾಗಳಿಗೆ ನಗರದಲ್ಲಿ ಸಂಚರಿಸುವ ಮತ್ತು ರಿಕ್ಷಾ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲು ಅವಕಾಶ ಒದಗಿಸಿಕೊಡಬೇಕು ಎಂದರು.

ಉಡುಪಿ ಜಿಲ್ಲಾ ಟ್ಯಾಕ್ಸಿ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಖಾಸಗಿ ವಾಹನದ ಮಾಲೀಕರು ಅನಧಿಕೃತವಾಗಿ ಬಾಡಿಗೆಗೆ ತಮ್ಮ ವಾಹನಗಳನ್ನು ಕಲಿಸಿದ್ದಲ್ಲಿ, ಅಪಘಾತವಾದ ಸಂದರ್ಭದಲ್ಲಿ ಪರಿಹಾರ ಧನ ಹಣವನ್ನು ಪಡೆಯಲು ತೊಂದರೆ ಉಂಟಾಗುತ್ತಿದೆ. ನಿಜವಾಗಿಯೂ ಟ್ಯಾಕ್ಸಿ ಚಾಲನೆ ಮಾಡುತ್ತಿರುವ ವೃತ್ತಿ ಪರರಿಗೆ ಜೀವನ ನಿರ್ವಹಣೆಗೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಎಸ್ಪಿ ಡಾ.ಅರುಣ್ ಕೆ, ಎಎಸ್ಪಿ ಸಿದ್ಧಲಿಂಗಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ರವಿಶಂಕರ್, ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್, ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!