ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರ ತನಿಖೆಗೆ ಸಮಿತಿ ರಚನೆ: ಡಿಸಿ ಡಾ.ವಿದ್ಯಾಕುಮಾರಿ
ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರಕ್ಕೆ ಸಂಬಂಧಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಕ್ಕರೆ ಆಯುಕ್ತರು ನಿರ್ದೇಶನ ನೀಡಿದ್ದು, ಅದರಂತೆ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಹು ಕೋಟಿ ಹಗರಣದ ಬಗ್ಗೆ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ನಮ್ಮ ಸಮಿತಿಯಲ್ಲಿ ಜಿಪಂ ಉಪಕಾರ್ಯದರ್ಶಿ, ತೆರಿಗೆ ಇಲಾಖೆ ಅಧಿಕಾರಿ, ಎಸಿ, ಇಂಜಿನಿಯರ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಿದ್ದಾರೆ. ಈ ಸಮಿತಿಯು ತನಿಖೆ ನಡೆಸಿ ವರದಿಯನ್ನು ಸಲ್ಲಿಸಲಿದೆ ಎಂದರು.
ಸರಕಾರ ತನಿಖೆಗೆ ಆದೇಶ ನೀಡಿರುವುದರಿಂದ ಹಾಗೂ ಯಾವುದೇ ಗೊಂದಲ ನಿರ್ಮಾಣವಾಗಬಾರದೆಂಬ ಕಾರಣಕ್ಕೆ ಪರಶುರಾಮ್ ಥೀಮ್ ಪಾರ್ಕ್ ಕಾಮಗಾರಿ ಯನ್ನು ಸ್ಥಗಿತಗೊಳಿಸಲಾಗಿದೆ. ತನಿಖೆಯ ವರದಿ ಬರುವವರೆಗೆ ಕಾಮಗಾರಿಯನ್ನು ಆರಂಭಿಸುವುದಿಲ್ಲ. ಮುಂದೆ ಸರಕಾರ ರಚಿಸುವ ಸಮಿತಿಯ ಸುಪರ್ದಿಯ ಲ್ಲಿಯೇ ಕಾಮಗಾರಿ ಮುಂದುವರೆಸುವುದು ಸೂಕ್ತ ಎಂದು ಅವರು ಹೇಳಿದರು.
ಧಾರವಾಡದಲ್ಲಿ ನಿರ್ಮಿಸಲಾಗುತ್ತಿರುವ ಇಂದ್ರಾಳಿ ರೈಲ್ವೆ ಸೇತುವೆಯನ್ನು ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಜನವರಿ ಮೊದಲ ವಾರದಲ್ಲಿ ಜಂಟಿಯಾಗಿ ಪರಿಶೀಲನೆ ನಡೆಸಿ, ಬಳಿಕ ಇಲ್ಲಿಗೆ ತಂದು ಜೋಡಣೆ ಮಾಡಲಿದೆ. ಜೋಡಣೆ ಮಾಡಲು ಒಂದು ತಿಂಗಳ ಕಾಲಾವಕಾಶ ಕೇಳಿದ್ದು, ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಬಂಧ ಹೈಕೋರ್ಟ್ನಲ್ಲಿ 2024ರ ಮಾರ್ಚ್ವರೆಗೆ ತಡೆಯಾಜ್ಞೆ ಇದ್ದು, ಈ ಬಗ್ಗೆ ಗಂಭೀರವಾಗಿ ತೆಗೆದು ಕೊಂಡು ತೆರವುಗೊಳಿಸುವಂತೆ ಅಡ್ವಕೇಟ್ ಜನರಲ್ಗೆ ತಿಳಿಸಿದ್ದೇವೆ. ಸಂತೆಕಟ್ಟೆ ರಾಷ್ಟ್ರ್ರೀಯ ಹೆದ್ದಾರಿ ಫ್ಲೈ ಓವರ್ ಕಾಮಗಾರಿಯು ಅಕ್ಟೋಬರ್ ತಿಂಗಳಿಗೆ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಬಜೆ ಡ್ಯಾಂನಲ್ಲಿ ಸದ್ಯದ ಪರಿಸ್ಥಿತಿವರೆಗೆ ಯಾವುದೇ ನೀರಿನ ಕೊರತೆ ಇಲ್ಲ. ಡಿಸೆಂಬರ್ ಮೊದಲ ವಾರದಲ್ಲಿ ಮಳೆ ಬಂದ ಪರಿಣಾಮ ಬಜೆ ಡ್ಯಾಂನಲ್ಲಿ ಹೊರ ಹರಿವು ಇದೆ. ಇದು ಜನವರಿ 20ವರೆಗೂ ಇರುವ ಸಾಧ್ಯತೆ ಇದೆ. ಮುಂದೆ ಪಡಿತರ ವ್ಯವಸ್ಥೆಯ ಮೂಲಕ ನೀರು ನೀಡುವ ಮೂಲಕ ಯಾವುದೇ ರೀತಿಯಲ್ಲೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳ ಲಾಗುವುದು ಎಂದು ಅವರು ತಿಳಿಸಿದರು.
ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯು ಫೆಬ್ರವರಿ ಮಾರ್ಚ್ ವೇಳೆ ಮುಗಿದು ನೀರು ಸರಬರಾಜು ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಅರಣ್ಯ ಇಲಾಖೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಕ್ರಮ ತೆಗೆದು ಕೊಳ್ಳಲಾಗಿದೆ. ಅದೇ ರೀತಿ ಪೈಪ್ಲೈನ್ ಸಂಬಂಧ ಸ್ವರ್ಣ ನದಿಯಲ್ಲಿ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಒಪ್ಪಿಗೆ ಸಿಕ್ಕಿದೆ ಎಂದು ಅವರು ಹೇಳಿದರು.
ಉಡುಪಿಯ ಹಳೆ ತಾಲೂಕು ಕಚೇರಿಯಲ್ಲಿರುವ 100ವರ್ಷ ಹಳೆಯ ಸಬ್ ಜೈಲು ಕಟ್ಟಡವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಿತಿ ಸಭೆ ನಡೆಸಲಾಗಿದ್ದು, ಈ ಕುರಿತು ಉಪ ಸಮಿತಿಯನ್ನು ರಚಿಸಲಾಗಿದೆ. ಈ ಉಪ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಈ ಮೂಲಕ ಈ ಕಟ್ಟಡವನ್ನು ಉಳಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉಡುಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೊಸ ವರ್ಷ ಆಚರಣೆ ನಡೆಸಲು ರಾತ್ರಿ 12.30ರವರೆಗೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 10ಗಂಟೆಯ ನಂತರ ಧ್ವನಿವರ್ಧಕ ಬಳಸಲು ಅವಕಾಶ ಇಲ್ಲ. ಮಲ್ಪೆ, ಮರವಂತೆ, ತ್ರಾಸಿ, ಕಾಪು, ಪಡುಬಿದ್ರೆ ಸೇರಿದಂತೆ ಎಲ್ಲ ಬೀಚ್ಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಅದಕ್ಕಾಗಿ 100 ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕುಂದಾಪುರ ಉಪವಿಭಾಗದ ಆಯುಕ್ತೆ ರಶ್ಮೀ ಉಪಸ್ಥಿತರಿದ್ದರು.
‘ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಇಲ್ಲ’
ಉಡುಪಿ ಜಿಲ್ಲೆಯಲ್ಲಿ ಸದ್ಯ ಮರಳು ಸಮಸ್ಯೆ ಇಲ್ಲ. ಜಿಲ್ಲೆಯಲ್ಲಿ ಶೇ.80ರಷ್ಟು ಮರಳು ದೊರೆಯುತ್ತಿದೆ. ಮರಳು ಸಿಗುತ್ತಿಲ್ಲ ಎಂದು ನಮ್ಮ ಕಂಟ್ರೋಲ್ ರೂಮಿಗೆ ಯಾವುದೇ ದೂರು ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದರು.
ಸ್ಥಳೀಯವಾಗಿ ಮರಳು ಪೂರೈಕೆ ಮಾಡಲು ಈಗಾಗಲೇ 34 ಗ್ರಾಪಂಗಳಿಗೆ ಅನುಮತಿ ನೀಡಲಾಗಿದೆ. ಇದೀಗ ಮತ್ತೆ ಹೆಚ್ಚುವರಿಯಾಗಿ 34 ಗ್ರಾಪಂಗಳಿಗೆ ಆದೇಶ ನೀಡಲಾಗಿದೆ. ಜಿಲ್ಲೆಯ ಮರಳು ಹೊರಗಡೆ ಹೋಗದಂತೆ ಕಟ್ಟೆಚ್ಚರ ವಹಿಸಿದ ಪರಿಣಾಮ ಇಲ್ಲಿ ಮರಳಿನ ಸಮಸ್ಯೆ ಆಗಿಲ್ಲ ಎಂದರು.
ಸಿಆರ್ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡುವ ಕುರಿತ ವ್ಯಾಜ್ಯ ಸುಪ್ರೀಂಕೋರ್ಟಿನಲ್ಲಿ ಇನ್ನೂ ಇತ್ಯರ್ಥ ಆಗಿಲ್ಲ. ಆ ಮಧ್ಯೆ ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರಕಾರ ಮಾರ್ಗಸೂಚಿ ರಚಿಸಲು ಸಿದ್ಧತೆ ನಡೆಸಿತ್ತು. ಅದರಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ಸಿಆರ್ಝೆಡ್ನಲ್ಲಿ ಮರಳುಗಾರಿಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.