ಉಡುಪಿ: ಹೊಸ ವರ್ಷಾಚರಣೆ- ರಾತ್ರಿ 10 ಬಳಿಕ ಡಿಜೆ ಸೌಂಡ್‌ಗೆ ಬ್ರೇಕ್

ಉಡುಪಿ: ಈ ಬಾರಿಯ ಹೊಸ ವರ್ಷ ಆಚರಿಸಲು ಕಾರ್ಯಕ್ರಮ ಆಯೋಜಕರಿಗೆ ಮಧ್ಯರಾತ್ರಿ 12.30 ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾತ್ರಿ 10 ಗಂಟೆಯಿಂದ ಧ್ವನಿ ವರ್ಧಕ ಬಳಸಲು ಅವಕಾಶ ಇರುವುದಿಲ್ಲ. ಬಳಿಕ ಧ್ವನಿವರ್ಧಕ ಇಲ್ಲದೆ ಅಥವಾ ಒಳಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಡಿ.31ರ ರಾತ್ರಿ ವೇಳೆ ಉಡುಪಿ ಜಿಲ್ಲೆಯ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಬೀಚ್‌ನಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆ, ಕಳ್ಳತನ, ಅಸಭ್ಯ ವರ್ತನೆ ಗಳು ಕಂಡುಬಂದರೆ ತಕ್ಷಣ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಇದಕ್ಕೆ ತಕ್ಷಣವೇ ಸ್ಪಂದಿಸಿ ಕ್ರಮ ತೆಗೆದುಕೊಳ್ಳಲು ಆಗುತ್ತದೆ ಎಂದು ಅವರು ಹೇಳಿದರು.

ಜಿಲ್ಲೆಯಾದ್ಯಂತ ಅನೈತಿಕ ಪೊಲೀಸ್‌ಗಿರಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ವಿಶೇಷ ತಂಡವನ್ನು ರಚಿಸಲಾಗದೆ. ಯಾವುದೇ ವ್ಯಕ್ತಿಗಳ ಬಗ್ಗೆ ಸಂಶಯ ಇದ್ದರೆ ತಾವೇ ನೇರವಾಗಿ ಹೋಗಿ ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸರಿಗೆ ಮಾಹಿತಿ ನೀಡಬೇಕು. ಬಳಿಕ ಅದನ್ನು ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಹೊಸ ವರ್ಷ ಆಚರಣೆಯ ಕಾರ್ಯಕ್ರಮಗಳಲ್ಲಿ ಡ್ರಗ್ಸ್ ಬಳಕೆ ಹಾಗೂ ರೇವು ಪಾರ್ಟಿ ನಡೆಯದಂತೆ ಪಾರ್ಟಿ ಮಾಡುವ ಅಪಾರ್ಟ್‌ಮೆಂಟ್, ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನು ಪರಿಶೀಲನೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡಲಾಗುವುದು. ಆ ದಿನ ರಾತ್ರಿ ಯಾವುದೇ ರೀತಿಯಲ್ಲೂ ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಟ್ರಾಫಿಕ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!