ಬಂಟಕಲ್ಲು: ತಾಂತ್ರಿಕ- ಸಾಂಸ್ಕೃತಿಕ ಸ್ಪರ್ಧೆ ‘ವರ್ಣೋತ್ಸವ’ ಉದ್ಘಾಟನೆ
ಉಡುಪಿ: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಅಂತರ ಕಾಲೇಜು ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ‘ವರ್ಣೋತ್ಸವ-2023’ ಇದರ ಉದ್ಘಾಟನೆಯು ಬುಧವಾರ ಕಾಲೇಜಿನ ಆವರಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಹಾಗೂ ಪ್ರಸಕ್ತ ಸಿಟ್ರಿಕ್ಸ್ನ ಕ್ಲೌಡ್ ಸಾಪ್ಟ್ ವೇರ್ ಗ್ರೂಪ್ನಲ್ಲಿ ಲೀಡ್ ಸಪೋರ್ಟ್ ಇಂಜಿನಿಯರ್ ಆಗಿರುವ ಶ್ರೀರಕ್ಷಾ ಆಚಾರ್ಯ ಮಾತನಾಡಿ, ಇಂತಹ ಅಂತರ ಕಾಲೇಜು ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವೃತ್ತಿ ಜೀವನದ ಸವಾಲು ಗಳನ್ನು ಸಮರ್ಥವಾಗಿ ಎದುರಿಸಲು ತುಂಬಾ ಸಹಕಾರಿಯಾಗುತ್ತದೆ ಎಂದರು.
ಅತಿಥಿಯಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಮರ್ಸಿಡಿಸ್ ಬೆನ್ಸ್ ಇದರ ಸಂಶೋಧನೆ ಮತ್ತು ಅಭಿವೃದ್ದಿ ವಿಭಾಗದ ಇಂಜಿನಿಯರ್ ಅಭಿನವ ಕರಬ ಮಾತನಾಡಿದರು.ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳ ಹಾಗೂ ಸಾಂಸ್ಕೃತಿಕ- ತಾಂತ್ರಿಕ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಹಾಗೂ ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಉಪಸ್ಥಿತರಿ ದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪೌಲ್ ಸೂರಜ್ ಮತ್ತು ಪ್ರಾದ್ಯಾಪಕಿ ಜಯಶ್ರೀ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿನಿ ನತಾಶ ಲೋಬೊ ವಂದಿಸಿದರು. ಆತ್ಮಿಕ ಶೆಟ್ಟಿ ಮತ್ತು ಸುಮಯ್ಯ ಕಾರ್ಯಕ್ರಮ ನಿರೂಪಿಸಿದರು.