ರಾಜ್ಯ ಸರ್ಕಾರ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ- ವಿ.ಸುನಿಲ್ ಕುಮಾರ್

ಬೆಂಗಳೂರು: ಆಡಳಿತ ಕನ್ನಡಕ್ಕಾಗಿ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನಡೆಸಿದ ಹೋರಾಟವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.ಕನ್ನಡಕ್ಕಾಗಿ ಧ್ವನಿ ಎತ್ತಿದ ನೂರಾರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಹೋರಾಟಕ್ಕೆ ನೀಡಿದ ಕರೆಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದರಿಂದ ಸಾರ್ವಜನಿಕ ಜನಜೀವನಕ್ಕೆ ಹಾಗೂ ವ್ಯಾಪಾರೋದ್ಯಮಕ್ಕೆ ತೊಂದರೆಯಾಗುವುದಕ್ಕೆ ಸರ್ಕಾರವೇ ಕಾರಣವಾದಂತಾಗಿದೆ. ಸಂಘಟನೆಯ ಮುಖ್ಯಸ್ಥರ ಜತೆಗೆ ಮಾತುಕತೆ ನಡೆಸದೇ ಇರುವುದು ಇದಕ್ಕೆಲ್ಲ ಕಾರಣವಾಗಿದೆ. ಕಾಂಗ್ರೆಸ್ ಗೆ ಕನ್ನಡ ಹೋರಾಟ ಎಂಬುದು ಮತ ಸರಕಿಗಷ್ಟೇ ಸೀಮಿತ ಎಂದು ಇದರಿಂದ ಅರ್ಥವಾಗುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ಆಡಳಿತದಲ್ಲಿ ಕನ್ನಡವನ್ನು ಜಾರಿಗೊಳಿಸುವ ಉದ್ದೇಶದಿಂದ ನಾವು ಅಧಿಕಾರದಲ್ಲಿದ್ದಾಗ ಕನ್ನಡ ಭಾಷಾ ಸಮಗ್ರ ಅನುಷ್ಠಾನ ವಿಧೇಯಕವನ್ನು ಜಾರಿಗೆ ತಂದಿದ್ದೆವು. ಏಕೀಕರಣದ ನಂತರ ಆಡಳಿತ ಕನ್ನಡಕ್ಕಾಗಿ ಜಾರಿಗೆ ತಂದಿದ್ದ ಸಮಗ್ರ ವಿಧೇಯಕ ಇದಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಕಾಯಿದೆಯನ್ನು ಮರೆತಿದೆ. ಕನ್ನಡವನ್ನು ಕಡೆಗಣಿಸಲಾಗಿದೆ. ನಾಮಫಲಕ ಸೇರಿದಂತೆ ಆಡಳಿತದಲ್ಲೂ ಕನ್ನಡಕ್ಕೆ ಆದ್ಯತೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಕಾಲ ಹರಣ ಮಾಡದೇ ಈ ಕಾಯಿದೆ ಅನುಷ್ಠಾನ ಮಾಡಿ ಎಂದು ಆಗ್ರಹಿಸಿದ್ದಾರೆ.


Leave a Reply

Your email address will not be published. Required fields are marked *

error: Content is protected !!