ಹೆಬ್ರಿ ಅಮೃತಭಾರತಿ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಸಾಂಸ್ಕೃತಿಕ ಉತ್ಸವ- ಅಮೃತ ವೈಭವ
ಹೆಬ್ರಿ ಅಮೃತ ಭಾರತಿಯಲ್ಲಿ ಭಾರತೀಯ ಶಿಕ್ಷಣ ನೀಡುವ ಮಹತ್ವದ ಕಾರ್ಯ – ಸುನಿಲ್ ಕುಮಾರ್
ಹೆಬ್ರಿ: ಭಾರತೀಯ ಶಿಕ್ಷಣವನ್ನು ನೀಡುವ ಮಹತ್ವದ ಕಾರ್ಯವನ್ನು ಹೆಬ್ರಿ ಅಮೃತ ಭಾರತಿ ಸಂಸ್ಥೆಗಳು ನಡೆಸುತ್ತಿದೆ. ಸರ್ಕಾರದ ಶಾಲೆಗಳಲ್ಲಿ ಭಾರತೀಯ ಮತ್ತು ಸಂಸ್ಕಾರದ ಶಿಕ್ಷಣ ದೊರೆಯುತ್ತಿಲ್ಲ, ಆ ಮಹಾನ್ ಸೇವೆಯು ಅಮೃತ ಭಾರತಿಯಲ್ಲಿ ನಡೆಯುತ್ತಿದೆ. ಆ ಮೂಲಕ ಅಮೃತ ಭಾರತಿಯು ಈಗ ಅಮೃತ ವೈಭವವನ್ನು ಕಾಣುತ್ತಿದೆ. ಹಿಂದೂತ್ವ, ರಾಷ್ಟ್ರೀಯತೆ ಮತ್ತು ಸಂಸ್ಕಾರದ ಶಿಕ್ಷಣ ನೀಡುವ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಕಾರ್ಕಳ ಶಾಸಕರಾದ ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಹೊನಲು ಬೆಳಕಿನ ಸಾಂಸ್ಕೃತಿಕ ಉತ್ಸವ – ಅಮೃತ ವೈಭವವನ್ನು ಉದ್ಘಾಟಿಸಿ ಮಾತನಾಡಿದರು. ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಅಧ್ಯಕ್ಷ ಗುರುದಾಸ ಶೆಣೈ ಮಾತನಾಡಿ 2006ರಲ್ಲಿ ಸದ್ದಿಲ್ಲದೆ ಅಮೃತ ಭಾರತಿಯು ಶೈಕ್ಷಣಿಕ ಸಾಧನೆಯನ್ನು ಮಾಡುತ್ತಿದೆ. ಅಂದು 12 ಮಂದಿ ಸಮಾನ ಮನಸ್ಕರ ತಂಡದ ಕನಸಿನ ಅಮೃತ ಭಾರತಿ ಟ್ರಸ್ಟ್ ಮೂಲಕ 22ವಿದ್ಯಾರ್ಥಿಗಳಿಂದ ಆರಂಭಗೊಂಡ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯು ಇಂದು 2047 ವಿದ್ಯಾರ್ಥಿಗಳೊಂದಿಗೆ ಸರ್ವರ ಸಹಕಾರದಲ್ಲಿ ಎತ್ತರದಲ್ಲಿ ಬೆಳೆದು ನಿಂತಿದೆ.
ಬುನಾದಿ ಶಿಕ್ಷಣದ ಮೂಲಕ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುನ್ನಡೆಸುವ ಕೈಂಕರ್ಯವನ್ನು ಮಾಡುತ್ತ ಬರುತ್ತಿದೆ, ಮುಂದೆಯೂ ಹಲವು ಅಭಿವೃದ್ಧಿ ಕಾರ್ಯವನ್ನು ಮಾಡುವ ಮೂಲಕ ಸಂಸ್ಥೆಯನ್ನು ಬೆಳೆಸುತ್ತೇವೆ ಎಂದರು.
ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಸಿ.ಎ.ರವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ವಿಧ್ಯಾಬಾರತಿ ದಕ್ಷಿಣ ಮಧ್ಯ ಕ್ಷೇತ್ರದ ಸಂಶೋಧನಾ ವಿಭಾಗದ ಮುಖ್ಯಸ್ಥ ಜಿ.ಆರ್. ಜಗದೀಶ್, ಮುಂಬಯಿ ಉದ್ಯಮಿ ಯದುನಾರಾಯಣ ಶೆಟ್ಟಿ, ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ನಾಯಕ್, ಯುನಿಯನ್ ಬ್ಯಾಂಕ್ ಡಿಜಿಎಂ ಡಾ.ಎಚ್.ಟಿ. ವಾಸಪ್ಪ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಎಸ್ ಬಂಗೇರ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಿದ್ಯಾ ಭಾರತಿಯ ವಿವಿಧ ಪ್ರಮುಖರಾದ ಪಾಂಡುರಂಗ ಪೈ ಸಿದ್ಧಾಪುರ, ಉಮೇಶ್, ವೆಂಕಟರಮಣ ಗಂಗೊಳ್ಳಿ, ರವಿರಾಜ್ ಶೆಟ್ಟಿ, ದಿನೇಶ್ ಸಾವಂತ್, ರಾಜಾರಾಮ್ ಹೊಳೆಹೊನ್ನೂರು,ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಗಣ್ಯರು, ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರಾಜೇಶ ನಾಯಕ್, ಅಮೃತಭಾರತಿ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಗುರುದಾಸ ಶೆಣೈ, ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ, ಅಮೃತಭಾರತಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಹೆಬ್ರಿಯ ಬಾಲಕೃಷ್ಣ ಮಲ್ಯ, ಭಾಸ್ಕರ ಜೋಯಿಸ್, ಸುಧೀರ್ ನಾಯಕ್, ದಿನೇಶ ಪೈ, ಸತೀಶ್ ಪೈ, ಯೋಗೀಶ್ ಭಟ್, ಗಣೇಶ್ ಕಿಣಿ ವಿಷ್ಣುಮೂರ್ತಿ ನಾಯಕ್ ಸಹಿತ ಗಣ್ಯರು ಅಮೃತ ವೈಭವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವಿಧಾನ ಪರಿಷತ್ ಸದಸ್ಯರಾದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸರ್ಕಾರವು ಜಾತಿ ಧರ್ಮದ ಶಿಕ್ಷಣ ನೀಡುವ ಬದಲು ರಾಷ್ಟ್ರಧರ್ಮದ ಶಿಕ್ಷಣವನ್ನು ನೀಡುವ ಕೆಲಸ ಆಗಬೇಕಿದೆ. ಅಂತಹ ಕೆಲಸವನ್ನು ಹೆಬ್ರಿ ಅಮೃತ ಭಾರತಿ ಶಿಕ್ಷಣವನ್ನು ನೀಡುತ್ತ ಮಾದರಿಯಾಗಿದೆ. ಈಗ 90% ಸುಶಿಕ್ಷಿತರಿದ್ದಾರೆ. ಆದರೇ ಸಂಸ್ಕಾರವಂತರಲ್ಲ. ರಾಜ್ಯದ 48 ಸಾವಿರ ಸರ್ಕಾರಿ ಶಾಲೆಯಲ್ಲಿ 1 ಕೋಟಿ ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಹೆಬ್ರಿ ಅಮೃತ ಭಾರತಿ ಶಿಕ್ಷಣ ಸಂಸ್ಥೆಯಂತಹ ಶಿಕ್ಷಣ ಸಂಸ್ಥೆ ರಾಜ್ಯದಲ್ಲೇ ಇಲ್ಲ ಎಂದರು.
ದೇಶಿಯ ಸಂಸ್ಕೃತಿಯನ್ನು ಸಾರುವ ಸಂಚಲನ, ಘೋಷ್, ಶಿಶು ನೃತ್ಯ, ಸಾಮೂಹಿಕ ವ್ಯಾಯಾಮ, ಏಕಚಕ್ರ, ದ್ವಿಚಕ್ರ ಸಮತೋಲನ, ಪಿರಮಿಡ್, ಕುಣಿತ ಭಜನೆ, ಮಲ್ಲಕಂಬ,ರಚನೆ, ಜಡೆ ಕೋಲಾಟ, ಬೆಂಕಿ ಸಾಹಸ, ಜನಪದ ನೃತ್ಯ ವೈವಿದ್ಯ, ಯೋಗಾಸನ, ನೃತ್ಯ ರೂಪಕ ಸಹಿತ ಕಾರ್ಯಕ್ರಮಗಳು ಅಮೃತ ವೈಭವದಲ್ಲಿ ಪ್ರದರ್ಶನಗೊಂಡಿತು. ದೈಹಿಕ ಶಿಕ್ಷಣ ನಿರ್ದೇಶಕ ವಿಜಯ ಕುಮಾರ್ ಶೆಟ್ಟಿ ನಿರೂಪಿಸಿದರು.
2047 ವಿದ್ಯಾರ್ಥಿಗಳು ಕಲಿಯುತ್ತಿರುವ ಸಂಸ್ಥೆಯಲ್ಲಿ ಹೊಸ ಪರಿಕಲ್ಪನೆಯಲ್ಲಿ ಅಮೃತ ವೈಭವವನ್ನು ಮಾಡಲಾಗುತ್ತಿದೆ. ಹೆಬ್ರಿಯ ಉತ್ಸವವಾಗಿ ಅಮೃತ ವೈಭವ ಮೂಡಿಬಂದಿದೆ. ವಿದ್ಯಾರ್ಥಿಗಳ ಪೋಷಕರು ಸೇರಿ 10 ಸಾವಿರ ಮಂದಿ ಅಮೃತ ವೈಭವಕ್ಕೆ ಸಾಕ್ಷಿಯಾದರು.