ಹಿಜಾಬ್ ಬ್ಯಾನ್ ಹಿಂಪಡೆದಲ್ಲಿ ಉಗ್ರ ಪ್ರತಿಭಟನೆ- ಹಿಂದೂ ಯುವಸೇನೆ ಎಚ್ಚರಿಕೆ
ಉಡುಪಿ: ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿ ಜಾರಿಗೆ ತಂದಿದ್ದ ಆದೇಶವನ್ನು ಹಿಂಪಡೆಯಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆಯನ್ನು ಉಡುಪಿ ಜಿಲ್ಲಾ ಹಿಂದೂ ಯುವ ಸೇನೆ ಅಧ್ಯಕ್ಷ ಅಜಿತ್ ಕುಮಾರ್ ಕೊಡವೂರು ತೀವ್ರವಾಗಿ ಖಂಡಿಸಿದ್ದಾರೆ.
ಯಾವ ಬಟ್ಟೆ ಹಾಕಬೇಕು, ಏನನ್ನು ತಿನ್ನಬೇಕು ಎಂಬುದು ವೈಯಕ್ತಿಕ ಆಯ್ಕೆ. ಈ ವಿಚಾರದಲ್ಲಿ ಸರ್ಕಾರ ಯಾಕೆ ಅಡ್ಡಿ ಮಾಡಬೇಕು? ನಾನು ಪಂಚೆ ಧರಿಸುತ್ತೇನೆ, ನೀವು ಪ್ಯಾಂಟ್ ಮತ್ತು ಶರ್ಟ್ ಧರಿಸುತ್ತೀರಿ. ಇದರಲ್ಲಿ ತಪ್ಪೇನಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಇದು ಮೂರ್ಖತನದ ಪರಮಾವಧಿ, ಶಾಲೆ- ಕಾಲೇಜುಗಳಲ್ಲಿ ಮಕ್ಕಳು ಸಮಾನತೆಯಿಂದ ಬೆಳೆಯಬೇಕು ಎಂದೇ ಸಮವಸ್ತ್ರ ನೀತಿ ತರಲಾಗಿದೆ ಎಂದು ನೆನಪಿಸಿದರು.
ಹಿಜಾಬ್ ಬ್ಯಾನ್ ಅನ್ನು ಯಥಾತ್ತಾಗಿ ಪಾಲಿಸಬೇಕು ಒಂದು ವೇಳೆ ಬ್ಯಾನ್ ಹಿಂಪಡೆದರೆ ಮರು ದಿನವೇ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಹಿಂದೂ ಮಕ್ಕಳಿಗೆ ಕೇಸರಿ ಶಾಲು ಧರಿಸಲು ಸೂಚಿಸಲಾಗುವು ದು ಎಂದು ಎಚ್ಚರಿಸಿದರು. ಯಾವ ಬಟ್ಟೆ ಹಾಕಬೇಕು, ಏನನ್ನು ತಿನ್ನಬೇಕು ಎಂಬ ವೈಯಕ್ತಿಕ ಆಯ್ಕೆ ಹಿಂದೂ ಮಕ್ಕಳಿಗೆ ಕೂಡ ಇದೆ ಎಂದು ಸಿದ್ದರಾಮಯ್ಯಗೆ ನೆನಪಿಸಲಾಗುವುದು ಎಂದು ತಿಳಿಸಿದರು.
ಇನ್ನು ಕೆಲವೇ ತಿಂಗಳಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಸಿ.ಇ.ಟಿ, ನೀಟ್ ಮುಂತಾದ ವಿಧ್ಯಾರ್ಥಿ ಜೀವನದಲ್ಲಿ ಅತಿ ಮುಖ್ಯವಾದ ಪರೀಕ್ಷೆಗಳು ನಡೆಯಲಿದ್ದು ಇಂತಹ ಸಮಯದಲ್ಲಿ ಕೋಮು ಪ್ರಚೋದನೆ ನೀಡುವಂತ ಕೆಲಸ ಮಾಡಬಾರದು ಎಂದು ಸಿದ್ದರಾಮಯ್ಯನವರಿಗೆ ತಿಳಿಹೇಳಿದರು.
ಸಿದ್ದರಾಮಯ್ಯನವರು ಮಕ್ಕಳನ್ನು ಕೋಮು ಉಗ್ರವಾದಿಗಳನ್ನಾಗಿ ಮಾಡಲು ಹೊರಟಿದ್ದಾರೆ, ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಅವರಿಗೆ ದೂರದೃಷ್ಟಿ ಇಲ್ಲ, ಧರ್ಮದ ವಿಷ ಬೀಜ ಬಿತ್ತುವುದೇ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕೆಲಸ ಎಂದು ವಿಷಾದ ವ್ಯಕ್ತಪಡಿಸಿದರು.
ಹಿಜಾಬ್ ಬ್ಯಾನ್ ಹಿಂಪಡೆದಲ್ಲಿ ಉಡುಪಿ ಜಿಲ್ಲೆಯಲ್ಲಿ ಅತಿ ಉಗ್ರ ಪ್ರತಿಭಟನೆ ಮತ್ತು ಹೋರಾಟದ ಎಚ್ಚರಿಕೆ ನೀಡಿದ್ದಾರೆ.