ನ್ಯಾಯವಾದಿ ಶಾಂತಾರಾಮ್ ಶೆಟ್ಟಿಗೆ ಅಲೆವೂರು ಗ್ರೂಪ್ ಆವಾರ್ಡ್ ಪ್ರದಾನ
ಉಡುಪಿ, ಡಿ.23: ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ವತಿಯಿಂದ ನೀಡಲಾಗುವ 2023ನೇ ಸಾಲಿನ ಅಲೆವೂರು ಗ್ರೂಪ್ ಪ್ರಶಸ್ತಿಯನ್ನು ನ್ಯಾಯವಾದಿ ಎಂ.ಶಾಂತಾರಾಮ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಶನಿವಾರ ನಡೆದ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 19ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಎಲ್ಐಸಿ ಆಫ್ ಇಂಡಿಯಾದ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಪ್ರಬಂಧಕ ರಾಜೇಶ್ ವಿ. ಮುಧೋಳ್, ಶಾಂತಾರಾಮ್ ಶೆಟ್ಟಿ ಅವರಿಗೆ ಬೆಳ್ಳಿ ಫಲಕ ಸಹಿತ ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಶಾಂತಾರಾಮ್ ಶೆಟ್ಟಿ, ಇಂದಿನ ಯಾಂತ್ರಿಕ ಯುಗದಲ್ಲಿ ಮಕ್ಕಳ ಬಾಲ್ಯವನ್ನು ಕಸಿಯುವ ಪ್ರಯತ್ನವನ್ನು ಪೋಷಕರು ಮಾಡುತ್ತಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳು ತಮ್ಮ ಬಾಲ್ಯದ ಅನುಭವ ಪಡೆಯು ವಲ್ಲಿ ವಂಚಿತರಾಗುತ್ತಿದ್ದಾರೆ. ಆದುದರಿಂದ ಪೋಷಕರು ತಮ್ಮ ಮಕ್ಕಳಿಗೆ ಪಾಠದಷ್ಟೆ ಆಟಕ್ಕೂ ಸಮಯ ನೀಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಕನಸು, ಕಠಿಣ ಪರಿಶ್ರಮ ಹಾಗೂ ದೇವರ ಮತ್ತು ಸಮಾಜದ ಆಶೀರ್ವಾದ ಮುಖ್ಯ. ಇವು ಮೂರು ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ದೇವರ ಬಗ್ಗೆ ಭಯ ಇರಬಾರದು. ಆದರೆ ಅರಿವು ಇರಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಮುಖ್ಯ ಅಥಿತಿಯಾಗಿ ಉದ್ಯಮಿ ಕಾರ್ತಿಕ್ ಶೆಟ್ಟಿ ಮಾತನಾಡಿದರು. ಪಾಲ್ಗೊಳ್ಳಲಿರುವರು. ಅಲೆವೂರು ಗ್ರೂಪ್ ಫೊರ್ ಎಜುಕೇಶನ್ ಅಧ್ಯಕ್ಷ ಅಲೆವೂರು ಗಣಪತಿ ಕಿಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ಶಾಂತಾ ಕಿಣಿ, ನೀತಾ ಕಿಣಿ ಉಪಸ್ಥಿತರಿದ್ದರು. ಅಲೆವೂರು ಗ್ರೂಪ್ನ ಕಾರ್ಯದರ್ಶಿ ಎ.ದಿನೇಶ್ ಕಿಣಿ ಸ್ವಾಗತಿಸಿದರು. ಪ್ರಾಂಶುಪಾಲೆ ರೂಪಾ ಡಿ.ಕಿಣಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಹರೀಶ್ ಕಿಣಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಶ್ರುತಿ ಗುರು ಮತ್ತು ಅನೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು