ಆಯುರ್ವೇದ ವೈದ್ಯರ ಬೇಡಿಕೆ ಈಡೇರಿಸಲು ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ
ಉಡುಪಿ, ಡಿ.21: ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆಯ ವೈದ್ಯರ ಘಟಕದ ವತಿಯಿಂದ ರಾಜ್ಯದ ಆಯುರ್ವೇದ ವೈದ್ಯರುಗಳ ಬಹು ದಿನಗಳ ಬೇಡಿಕೆಯೊಂದನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಆಯುರ್ವೇದ ವೈದ್ಯರುಗಳು ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಗಳ ಬಳಕೆ ಮಾಡಲು ಕಾಯ್ದೆಗೆ ತಿದ್ದುಪಡಿ ತರುವಂತೆ ತುಳುನಾಡ ರಕ್ಷಣಾ ವೇದಿಕೆ ಮನವಿಯಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಆಯುರ್ವೇದ ಪದ್ಧತಿ ಚಿಕಿತ್ಸೆಯು ನಮ್ಮ ಅತ್ಯಂತ ಪುರಾತನ ಆರೋಗ್ಯ ಸಂರಕ್ಷಣಾ ವ್ಯವಸ್ಥೆಯಾಗಿದ್ದು, ಇದು ಔಷಧ ಮತ್ತು ತತ್ವಶಾಸ್ತ್ರಗಳ ಸಂಮ್ಮಿಶ್ರಣ ವಾಗಿದೆ. ಆಯುರ್ವೇದ ವೈದ್ಯರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ಮೂಲ ಪದ್ಧತಿಯೊಂದಿಗೆ ಅಗತ್ಯ ಅಲೋಪತಿ ಔಷಧಗಳನ್ನು ಬಳಸದಂತೆ ನಿರ್ಬಂಧಿಸುವ ರಾಜ್ಯ ಸರಕಾರದ ಕಾನೂನು ಇವರ ವೃತ್ತಿ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಆಯುರ್ವೇದ ವೈದ್ಯರುಗಳಿಗೆ (ಬಿಎಎಂಎಸ್) ಅವಶ್ಯಕ ಅಲೋಪತಿ ಔಷಧಗಳನ್ನು ನೀಡಲು ಅನುಮತಿ ಇದ್ದು, ಆದರೆ ನಮ್ಮ ರಾಜ್ಯದಲ್ಲಿ ಇದಕ್ಕೆ ನಿರ್ಬಂಧವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಆಯುರ್ವೇದ ವೈದ್ಯರಿಗೆ ಕೆಪಿಎಂಇಎ ಕಾಯ್ದೆಯಡಿಯಲ್ಲಿ ಪರಿವೀಕ್ಷಣೆಯ ಹೆಸರಿನಲ್ಲಿ ಕಿರುಕುಳ ನೀಡಲಾಗು ತಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕಿದೆ. ಕಾನೂನಿನಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯದ ಆಯುರ್ವೇದ ವೈದ್ಯರಿಗೂ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅಲೋಪತಿ ಔಷಧಿ ಬಳಕೆ ಮಾಡಲು ಅವಕಾಶ ನೀಡಬೇಕು. ಇದಕ್ಕಾಗಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಅದನ್ನು ಜಾರಿಗೆ ತರಬೇಕು.
ಅಲ್ಲದೇ ಕರ್ನಾಟಕ ರಾಜ್ಯ ಆಯುರ್ವೇದ ಯುನಾನಿ ಬೋರ್ಡ್ ಮತ್ತು ಹೋಮಿಯೋಪತಿ ಬೋರ್ಡ್‌ಗಳ ಕಾಯ್ದೆಲ್ಲೂ ತಿದ್ದು ಪಡಿ ಮಾಡಿ ಜಾರಿಗೆ ತರಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯ ವೈದ್ಯರ ಘಟಕದ ಜಿಲ್ಲಾಧ್ಯಕ್ಷ ಡಾ.ರವೀಂದ್ರ ಹೇಳಿದ್ದಾರೆ. ಈ ಸಂಬಂಧ ಮನವಿಯನ್ನು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರು ಸ್ವೀಕರಿಸಿದರು.