ರಾಜಕೀಯ ಲಾಭ ಹುಡುಕುವುದೇ ಪ್ರಧಾನಿ ಮೋದಿಗೆ ಪ್ರಾಶಸ್ತ್ಯದ ಕೆಲಸ: ಕಾಂಗ್ರೆಸ್ ಲೇವಡಿ
ಬೆಂಗಳೂರು: ‘ಭದ್ರತಾ ವೈಫಲ್ಯದಿಂದ ಸಂಸತ್ ಭವನ ಅಪಾಯದಲ್ಲಿದೆ, ವಿಪಕ್ಷ ಸಂಸದರ ಅನೈತಿಕ ಅಮಾನತಿನಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನಮ್ಮ ಪ್ರಧಾನಿ ಮೋದಿ ಅವರಿಗೆ ಸಂಸತ್ ಕಲಾಪದಲ್ಲಿ ಭಾಗವಹಿಸಿ ದೇಶದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ದೇವೇಗೌಡರ ಕುಟುಂಬದೊಂದಿಗೆ ಸೇರಿ ರಾಜಕೀಯ ಲಾಭ ಹುಡುಕುವುದೇ ಪ್ರಾಶಸ್ತ್ಯದ ಕೆಲಸ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಗುರುವಾರ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಕುಟುಂಬ ರಾಜಕಾರಣ ವಿರೋಧಿಸಿ ಬೂಟಾಟಿಕೆಯ ಮಾತಾಡುವ ಪ್ರಧಾನಿ ಮೋದಿಯವರು ‘ದೇವೇಗೌಡರ ರಾಜಕೀಯ ಕುಟುಂಬ’ದೊಂದಿಗೆ ಪೋಸ್ ಕೊಡುವ ಮೂಲಕ ತಮ್ಮನ್ನು ತಾವೇ ವ್ಯಂಗ್ಯ ಮಾಡಿಕೊಳ್ಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದೆ.
ವಿಫಲ: ‘ಆಡಳಿತ ಪಕ್ಷವಾಗಿ ವಿಫಲವಾದ ಬಿಜೆಪಿ ವಿಪಕ್ಷವಾಗಿಯೂ ವಿಫಲವಾಗಿದೆ. ವಿಪಕ್ಷ ನಾಯಕನ ಆಯ್ಕೆಗೆ ಆರು ತಿಂಗಳು ತೆಗೆದುಕೊಂಡ ಬಿಜೆಪಿ ಆಂತರಿಕ ಕಲಹದಲ್ಲಿ ಕುದಿಯುತ್ತಿದೆ, ಹೀಗಿರುವಾಗ ಬಿಜೆಪಿಯಿಂದ ಪ್ರಜಾಪ್ರಭುತ್ವದ ಆಶಯಗಳನ್ನು ಗೌರವ ಸಿಗಲು ಸಾಧ್ಯವೇ ಇಲ್ಲ. ಇದು ನಿಮ್ಮವರೇ (ಬಿಜೆಪಿಯವರೇ)ನಿಮ್ಮ ವಿಪಕ್ಷ ನಾಯಕನ ಅಸಾಮಥ್ರ್ಯದ ಬಗ್ಗೆ ನೀಡಿದ ಸರ್ಟಿಫಿಕೇಟ್’ ಎಂದು ಕಾಂಗ್ರೆಸ್, ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿಕೆ ಉಲ್ಲೇಖಿಸಿ ಟೀಕಿಸಿದೆ.