ಉಡುಪಿ: ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾಗಿ ವಿಜಯ ಶೆಟ್ಟಿ ಕೊಂಡಾಡಿ ಆಯ್ಕೆ

ಉಡುಪಿ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯು ಉಡುಪಿ ತಾಲೂಕು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಕಛೇರಿ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ನಡೆಯಿತು.

ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್. ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲೆಯ ಅನೇಕ ಭಜನಾ ಮಂದಿರಗಳ ಶ್ರೇಯೋಭಿವೃದ್ಧಿಗೆ ಬಹಳಷ್ಟು ಸಹಾಯಧನ ವನ್ನು ಒದಗಿಸಿದೆ. ಭಜನೆಯನ್ನು ಸಮಾಜದಲ್ಲಿ ಇನ್ನಷ್ಟು ಉದ್ದೀಪನಗೊಳಿಸುವ ಸದುದ್ದೇಶದಿಂದ ಶ್ರೀಕ್ಷೇತ್ರದಿಂದ ಯೋಜನೆಯ ಮೂಲಕ ಪ್ರಾರಂಭಗೊಂಡಿರುವ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಹಲವಾರು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಉಡುಪಿ ಜಿಲ್ಲೆಯ ಉಡುಪಿ ತಾಲೂಕು ಭಜನಾ ಪರಿಷತ್ ಮಾದರಿ ಕಾರ್ಯಕ್ರಮಗಳೊಂದಿಗೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮೂಲಕ ತಾಲೂಕು ಪರಿಷತ್ ಇನ್ನಷ್ಟು ಸದೃಢವಾಗಿ ಬೆಳೆದು ಭಜನಾ ಕ್ಷೇತ್ರದಲ್ಲಿ ಸಾರ್ಥಕ ಸೇವೆ ನೀಡುವಂತಾಗಲಿ ಎಂದರು.

ಉಡುಪಿ ತಾಲೂಕು ಭಜನಾ ಪರಿಷತ್ ನ ಮುಂದಿನ 2 ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 2023-25ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಜಯ ಶೆಟ್ಟಿ ಕೊಂಡಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಅಂಬಲಪಾಡಿ ಸರ್ವಾನುಮತದಿಂದ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಪೇತ್ರಿ, ಉಪಾಧ್ಯಕ್ಷರುಗಳಾಗಿ ವಜ್ರಾಕ್ಷಿ ಪಿ. ದಾಸ್ ಕಡಿಯಾಳಿ, ಸುಮಿತ್ರಾ ನಾಯ್ಕ್ ಪೆರಂಪಳ್ಳಿ, ಜತೆ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಕೇದಾರ್, ಕೋಶಾಧಿಕಾರಿಯಾಗಿ ಪೂರ್ಣಿಮಾ ಪೆರ್ಡೂರು ಹಾಗೂ ವಲಯ ಸಂಯೋಜಕರಾಗಿ ರಾಧಾಕೃಷ್ಣ ಮೆಂಡನ್ ಮಲ್ಪೆ, ಯಶೋಧಾ ರಘುರಾಮ್ ಹೇರೂರು, ನೇತ್ರಾವತಿ ಅಂಬಾಗಿಲು ಹಾಗೂ ಸಹ ಸಂಯೋಜಕರಾಗಿ ಭಾಸ್ಕರ್ ಆಚಾರ್ಯ ಕೇದಾರ್, ಶಾಂಭವಿ ಕುಲಾಲ್ ಪೆರ್ಡೂರು, ಗೀತಾ ಕೃಷ್ಣರಾಜ್ ಆಯ್ಕೆಯಾಗಿದ್ದಾರೆ.

ಭಜನಾ ಪರಿಷತ್ತಿನ ನೂತನ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ, ತಾಲೂಕು ಭಜನಾ ಪರಿಷತ್ತಿಗೆ ತಾಲೂಕಿನ ಗರಿಷ್ಠ ಭಜನಾ ಮಂಡಳಿಗಳನ್ನು ಸೇರ್ಪಡೆಗೊಳಿಸುವ ಜೊತೆಗೆ ಭಜನಾ ಮಂಡಳಿಗಳಿಗೆ ಶ್ರೀ ಕ್ಷೇತ್ರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಪರಿಷತ್ತನ್ನು ಸದೃಢವಾಗಿ ಸಂಘಟಿಸಿ ಮುನ್ನಡೆಸಲು ಎಲ್ಲರ ಸಹಕಾರವನ್ನು ಕೋರಿದರು.

ತಾಲೂಕು ಪರಿಷತ್ತಿನ ನೂತನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಭಜನಾ ಪರಿಷತ್ತಿಗೆ ಹೊಸ ಭಜನಾ ಮಂಡಳಿಗಳ ಸೇರ್ಪಡೆ ಸಹಿತ ಭಜನಾ ತರಬೇತಿ ಕಮ್ಮಟ ಹಾಗೂ ಭಜನೆಯನ್ನು ಇನ್ನಷ್ಟು ಪ್ರಚಲಿತಗೊಳಿಸುವ ನಿರಂತರ ಕಾರ್ಯಕ್ರಮಗಳ ಆಯೋಜನೆ ಮೂಲಕ ಮಾದರಿ ಸಂಘಟನೆಗೆ ಪದಾಧಿಕಾರಿಗಳು, ವಲಯ ಸಂಯೋಜಕರು ಮತ್ತು ಭಜನಾ ಮಂಡಳಿಗಳ ಸಹಕಾರವನ್ನು ಕೋರಿದರು.

ಸಭೆಯ ಅಧ್ಯಕ್ಷತೆ ವಹಿಸಿದ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿ ಮಾತನಾಡಿ, ಭಜನಾ ಪರಿಷತ್ತಿನ ತಾಲೂಕು ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಸದವಕಾಶದ ಜೊತೆಗೆ ಶ್ರೀ ಕ್ಷೇತ್ರದಿಂದ ಉಡುಪಿ ತಾಲೂಕು ಭಜನಾ ಸಾಧಕ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಭಜನಾ ಪರಿಷತ್ತಿನ ನಿಗದಿತ ಕಾರ್ಯಕ್ರಮಗಳ ಸಹಿತ ಭಜನೆಗೆ ಪೂರಕವಾಗುವ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಉಡುಪಿ ತಾಲೂಕು ಭಜನಾ ಪರಿಷತ್ ಸಾಧನೆಯ ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.

ಯೋಜನೆಯ ಅಂಬಲಪಾಡಿ ವಲಯ ಸೇವಾ ಪ್ರತಿನಿಧಿಗಳಾದ ಗೀತಾ ಪಾಲನ್ ಗತ ಸಭೆಯ ವರದಿಯನ್ನು ಮಂಡಿಸಿ, ಕಾರ್ಯಕ್ರಮ ನಿರೂಪಿಸಿ, ಮಮತಾ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!