ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಮೃತ್ಯು
ಶಾಲೆ ತೆರಳಲು ಬಸ್ಗಾಗಿ ಕಾಯುತ್ತಿದ್ದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮೃತ ಶಾಲಾ ಬಾಲಕಿಯನ್ನು ಮೂಡಿಗೆರೆ ತಾಲೂಕಿನ ಜೋಗಣ್ಣಕೆರೆ ಗ್ರಾಮ ಸಮೀಪದ ಕೆಸವಳಲು ನಿವಾಸಿಗಳಾದ ಅರ್ಜುನ ಮತ್ತು ಸುಮಾ ಎಂಬವರ ಪುತ್ರಿ ಸೃಷ್ಟಿ(14) ಎಂದು ಗುರುತಿಸಲಾಗಿದ್ದು, ಈ ಬಾಲಕಿ ದಾರದಹಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳೆಂದು ತಿಳಿದು ಬಂದಿದೆ.
ಬುಧವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ಶಾಲೆಗೆ ಶಾಲೆಗೆ ತರೆಲಿದ್ದ ಸೃಷ್ಟಿ ಕೆಸವಳಲು ಗ್ರಾಮದಿಂದ ದಾರದಹಳ್ಳಿ ಶಾಲೆಗೆ ಬರಲು ಗ್ರಾಮದಲ್ಲಿ ಬಸ್ಗಾಗಿ ಕಾಯುತ್ತಿದ್ದಳು. ಈ ವೇಳೆ ಬಾಲಕಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಸ್ಥಳೀಯರು ಕೂಡಲೇ ಬಾಲಕಿಯನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದು, ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ವಿದ್ಯಾರ್ಥಿನಿ ಸೃಷ್ಟಿ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯನ್ನು ಆಗಲಿದ್ದು, ಆಸ್ಪತ್ರೆಯಲ್ಲಿ ಬಾಲಕಿ ಪೋಷಕರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.