ಮಲೆನಾಡು ಕರಾವಳಿ ಜನಪರ  ಒಕ್ಕೂಟ ಎರಡು ದಿನಗಳ ಶಿಬಿರ ಯಶಸ್ವಿ

ಕುಪ್ಪಳ್ಳಿ: ಮಲೆನಾಡು ಕರಾವಳಿ ಜನಪರ ಒಕ್ಕೂಟ ಹಮ್ಮಿಕೊಂಡಿದ್ದ  ಎರಡು ದಿನಗಳ ನಾಯಕತ್ವ ಶಿಬಿರ ಯಶಸ್ವಿಯಾಗಿ ಅಂತ್ಯಗೊಂಡಿತ್ತು.ಸುಧೀರ್ ಕುಮಾರ್ ಮುರೊಳ್ಳಿ ಹಾಗೂ ಅನಿಲ್ ಹೊಸಕೊಪ್ಪ ಇವರ ತಂಡ ಕುಪ್ಪಳ್ಳಿಯ ಹೇಮಾಂಗಣದಲ್ಲಿ ಎರಡು ದಿನಗ ನಾಯಕತ್ವ ಶಿಬಿರವನ್ನು‌ ಹಮ್ಮಿಕೊಂಡಿತ್ತು. ಶಿಬಿರಕ್ಕೆ ಚಿಕ್ಕಮಂಗಳೂರು,ಉಡುಪಿ ,ಶಿವಮೊಗ್ಗ ದಕ್ಷಿಣಕನ್ನಡ ,ಉತ್ತರಕನ್ನಡ ಕೊಡಗು ಹಾಸನ ಜಿಲ್ಲೆ ಗಳಿಂದ ನೂರಾರು ಮಂದಿ‌ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ,ಸಾಮಾಜಿಕ‌ ಕಾರ್ಯಕರ್ತರು, ಹೋರಾಟಗಾರರಿಂದ   ವಿವಿಧ ಗೋಷ್ಟಿಗಳು ನಡೆದವು.ಕರಾವಳಿ ಮಲೆನಾಡು ಪ್ರಸಕ್ತ ಕಾಲಘಟ್ಟದಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ವಿಚಾರದಲ್ಲಿ ಚಿಂತನ‌ ಮಂಥನಗಳು ನಡೆದವು.

ಮಲೆನಾಡಿನ ಜನರನ್ನು ಕಾಡುತ್ತಿರುವ ಅರಣ್ಯ ಪ್ರದೇಶದ ನಿವಾಸಿಗಳ ಒಕ್ಕೆಲಿಬ್ಬಿಸುವಿಕೆ ,ಕೃಷಿಕರು ಹಾಗೂ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಗಳಿಗೆ ಪರಿಹಾರ‌ ಒದಗಿಸುವ ನಿಟ್ಟಿನಲ್ಲಿ ಈ‌ ಭಾಗದ ಜನ ಹೋರಾಟಗಳಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಮಾಹಿತಿ ನೀಡಲಾಯಿತು.ಕರಾವಳಿಯಲ್ಲಿ ಜನ ಅನುಭವಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಬಗ್ಗೆ ಚರ್ಚೆ ನಡೆಸಲಾಯಿತು.ಪ್ರಮುಖವಾಗಿ ಕರವಾಳಿ ಹಾಗೂ ಮಲೆನಾಡನ್ನ ಅವರಿಸಿಕೊಂಡಿರುವ ಡ್ರಗ್ಸ್ ಪಿಡುಗಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ನಿರ್ಧಾರ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ನಡೆದ ಪ್ರಮುಖ ಹೈಲೈಟ್ಸ್

ಈ ಅಧ್ಯಯನ ಕೂಟವನ್ನು ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಉದ್ಘಾಟಿಸಲಾಯಿತು.

ಮ.ಕ.ಜ. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ, “ ನಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಗಾಢವಾದ ವೈಚಾರಿಕ ಮತ್ತು ಸಾಂವಿಧಾನಿಕ ಹಿನ್ನೆಲೆ, ನಿರ್ಧಿಷ್ಟ ಗುರಿ ಹಾಗೂ ಸ್ಪಷ್ಟತೆ ಇರಬೇಕು. ಮಲೆನಾಡು-ಕರಾವಳಿಯ ಜನರ ಬದುಕು, ಭಾವನೆ, ಶ್ರದ್ಧೆ, ನಂಬಿಕೆಗಳ ಗಟ್ಟಿ ಧ್ವನಿ ಈ ಒಕ್ಕೂಟವಾಗಿದೆ. ಸಾಂಸ್ಕೃತಿಕ ಆಸಕ್ತರೂ ನಮ್ಮ ಒಕ್ಕೂಟಕ್ಕೆ ಬೇಕಾಗಿದೆ.” ಎಂದು ಪ್ರಾಸ್ತಾವಿಸಿದರು.

“ ಮುಂದಿನ ದಿನಗಳಲ್ಲಿ ಮಾದಕ ದ್ರವ್ಯ ವಿರೋಧಿ ಶಿಬಿರಗಳನ್ನು ಕಾಲೇಜುಗಳಲ್ಲಿ ನಡೆಸುವ ತೀರ್ಮಾನಿಸಿದ್ದೇವೆ. ಕುವೆಂಪು ಮತ್ತು ಕಾರಂತರನ್ನು ಒಳಗೊಳ್ಳುವ “ಕಾಡು ಮತ್ತು ಕಡಲು” ಅಭಿಯಾನಕ್ಕೆ ಮೊದಲ ಭಾಗವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಮಲೆನಾಡು-ಕರಾವಳಿಗೆ ಹೈಕೋರ್ಟ್ ಬೆಂಚ್, ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಯಾಗಬೇಕು ಎಂಬುವುದು ಒಕ್ಕೂಟದ ಒತ್ತಾಯವಾಗಿದೆ. ಸಾಂಸ್ಕೃತಿಕ-ಸಾಹಿತ್ಯಿಕ, ಸಾಮರಸ್ಯ, ಸಮನ್ವಯ, ಸಹಬಾಳ್ವೆಯಿಂದ ಕೂಡಿದ ಸುಂದರವಾದ ನಾಳೆಯನ್ನು ಬಿಟ್ಟು ಹೋಗುವುದು ನಮ್ಮ ಉದ್ದೇಶ. ” ಎಂದವರು ಅಭಿಪ್ರಾಯಪಟ್ಟರು.

ಮೊದಲ ಗೋಷ್ಠಿಯಲ್ಲಿ ಚಿಂತಕರಾದ ಎಂ.ಜಿ. ಹೆಗಡೆ ಮಾತನಾಡಿ, “ ಸಂವಿಧಾನದಲ್ಲಿ ಉಪಾಸನೆಯ ಶಬ್ಧವಿದೆ. ಭಾರತ ಬಹುಮುಖಿ ಸಂಸ್ಕೃತಿಯ ದೇಶವಾಗಿದೆ. ನಾವು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಒಟ್ಟಾಗಿ ಕೊಂಡೊಯ್ಯಬೇಕಾಗಿದೆ. ನಿರ್ಧಿಷ್ಟವಾದ ಅಸ್ಪಷ್ಟತೆ ಮತ್ತು ಅಸಮಾನತೆಯನ್ನು ವಿರೋಧಿಸಬೇಕು. ನಂಬಿಕೆಯನ್ನು ವಿರೋಧ ಮಾಡಬಾರದು. ” ಎಂದರು.

ಎರಡನೇ ಗೋಷ್ಠಿಯಲ್ಲಿ ಚಿಂತಕ ಲಕ್ಷ್ಮೀಶ್ ಗಬ್ಬಲಡ್ಕ ಮಾತನಾಡಿ, “ ಪ್ರತಿಕ್ರಿಯಾತ್ಮಕ ಮತ್ತು ಸ್ಪರ್ಧಾತ್ಮಕ ನಡವಳಿಕೆಗಳೆರಡೂ ಅಪಾಯಕಾರಿ. ತನ್ನನ್ನು ಮೀರಿಸುವ ವ್ಯಕ್ತಿತ್ವ ರೂಪಿಸುವವನೇ ನಾಯಕ.” ಎಂದು ಹೇಳಿದ ರು.

ಮೂರನೇ ಗೋಷ್ಠಿಯಲ್ಲಿ ವಕೀಲರು ಹಾಗೂ ಹೋರಾಟಗಾರರಾದ ರವೀಂದ್ರನಾಥ್ ನಾಯಕ್ ಮಾತನಾಡಿ, “ ಅರಣ್ಯ ಹಕ್ಕು ಕಾಯ್ದೆ ಅರಣ್ಯವಾಸಿಗಳ ಪರವಾಗಿದ್ದರೂ ಅನುಷ್ಠಾನದಲ್ಲಿ ವೈಫಲ್ಯವಾಗಿದೆ. ಮೂರು ತಲೆಮಾರಿನ ದಾಖಲೆಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ತಮ್ಮ ಭೂಮಿಗಾಗಿ ಹಾಕಿದ ಅರಣ್ಯವಾಸಿಗಳ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಅರಣ್ಯವಾಸಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಾನೂನು ತಿಳುವಳಿಕೆ ನೀಡಬೇಕು. ಅರ್ಜಿ ವಿಲೇವಾರಿ ಅಗುವವರೆಗೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬಾರದು. ಅರಣ್ಯ ನಿವಾಸಿಗಳ ಹಕ್ಕುಗಳ ಬೇಡಿಕೆಯೊಂದಿಗೆ “ಲಕ್ಷ-ವೃಕ್ಷ” ಗಿಡ ನೆಡುವ ಕಾರ್ಯಕ್ರಮದಲ್ಲಿ ಮೂರೂವರೆ ಲಕ್ಷ ಗಿಡಗಳನ್ನೂ ನೆಟ್ಟಿದ್ದೇವೆ.” ಎಂದರು.

ಎಂ.ಎಲ್. ಮೂರ್ತಿ ಮಾತನಾಡಿ, “ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಗೆ ಜಾರಿಗೆ ಬಂದ 371ಜೆ ಕಲಂನಡಿ ಉದ್ಯೋಗಾವಕಾಶ, ಮುಂಬಡ್ತಿ ವಿಷಯದಲ್ಲಿ ಅನ್ಯಾಯವಾಗಯತ್ತಿದೆ, ನ್ಯಾಯಕ್ಕಾಗಿ ಹೋರಾಡಬೇಕಾಗಿದೆ. ಮಲೆನಾಡು-ಕರಾವಳಿಯನ್ನು ವಿಶೇಷ ಕೃಷಿ-ಸಾಂಸ್ಕೃತಿಕ ವಲಯವಾಗಿ ಘೋಷಿಸಬೇಕು. ನಾವು ಗಾಂಧಿ ಅಂಬೇಡ್ಕರ್ ಕೊಟ್ಟ ಮಾರ್ಗವನ್ನೇ ಅನುಸರಿಸಿಕೊಂಡು ಹೋಗಬೇಕು ” ಎಂದರು.

ನಂತರ ಕವಿಶೈಲಕ್ಕೆ ನಡಿಗೆಯನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನೆಂಪೆ ದೇವರಾಜ್ ಮತ್ತು ಧನಂಜಯ ಮೂರ್ತಿ ಕುವೆಂಪುರವರ ಸಾಧನೆ, ವೈಚಾರಿಕತೆ ಮತ್ತು ಶ್ರೀ ರಾಮಾಯಣ ದರ್ಶನಂ ನ ವಿಶೇಷತೆಯನ್ನು ವಿವರಿಸಿದರು. ಕುವೆಂಪುರವರನ್ನು ವಿಶ್ವಕವಿ ಎಂದು ಬಣ್ಣಿಸಿದರು.

ನಂತರ ವಿಠ್ಠಲ ಮಲೆಕುಡಿಯರ ಜೀವನದ ಕಥೆಯನ್ನಾಧರಿಸಿದ ಮನ್ಸೋರೆಯವರ 19-20-21 ಎಂಬ ಕನ್ನಡ ಸಿನಿಮಾವನ್ನು ಶಿಬಿರಾರ್ಥಿಗಳು ವೀಕ್ಷಿಸಿದರು.

ಎರಡನೆಯ ದಿನ ಮೊದಲ ಗೋಷ್ಠಿಯಲ್ಲಿ ಚಲನಚಿತ್ರ ನಿರ್ದೇಶಕ ಮನ್ಸೋರೆ ಮತ್ತು ಶಿಬಿರಾರ್ಥಿಗಳಿಂದ ಸಿನಿಮಾದ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಎರಡನೇ ಗೋಷ್ಠಿಯಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಭಾರತದ ಇತಿಹಾಸ ಮತ್ತು ಸಂವಿಧಾನದ ಮೌಲ್ಯವನ್ನು ವಿವರಿಸುತ್ತಾ, “ ದೇಶವನ್ನು ಅರಿಯದೆ ಸಂವಿಧಾನವನ್ನು ತಿಳಿಯಲು ಸಾಧ್ಯವಿಲ್ಲ. ದೇಶವೆಂದರೆ ಜನರು. ಭಾರತದ ಇತಿಹಾಸವನ್ನು ಪ್ರಾಚೀನ, ಮಧ್ಯಕಾಲೀನ, ಆಧುನಿಕ ಇತಿಹಾಸ ಎಂದು ಮೂರು ಭಾಗಗಳಲ್ಲಿ ಅರಿತುಕೊಳ್ಳಬಹುದು. ಇದರಿಂದ ದೇಶವನ್ನು ಅರ್ಥಮಾಡಿಕೊಳ್ಳಬಹುದು. ಎಲ್ಲಾ ಕ್ಷೇತ್ರಗಳಲ್ಲೂ ಹಣದ ಪ್ರಭಾವ ಕಡಿಮೆ ಮಾಡಲು ಪ್ರಯತ್ನಿಸಬೇಕು.” ಎಂದರು.

ಚಿಂತಕಿ ರಾಧಾ ಸುಂದರೇಶ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಶಾಸಕರಾದ ಟಿ.ಡಿ. ರಾಜೇಗೌಡ, ಮ.ಕ.ಜ. ಒಕ್ಕೂಟದ ಸಂಚಾಲಕರಾದ ಅನಿಲ್ ಹೊಸಕೊಪ್ಪ, ವಕೀಲರಾದ ಮನೋರಾಜ್ ಮೊದಲಾದ ಹಲವು ಚಿಂತಕರು ಎರಡು ದಿನಗಳ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಜಗದೀಶ್ ರವರು ಭಾವಗೀತೆಗಳನ್ನು ಹಾಡುವ ಮೂಲಕ ಕವಿಗಳನ್ನು ಹಾಗೂ ಆವರ ಕವಿತೆಗಳನ್ನು ನೆನಪಿಸಿ ಮನಸ್ಸನು ಮುದಗೊಳಿಸುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!