ಸುಜ್ಲಾನ್ ಭೂಮಿ ಪರಾಭಾರೆ ವಿರುದ್ಧ ಡಿ. 23 ರಂದು ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಪಡುಬಿದ್ರಿ: ಪಡುಬಿದ್ರಿ ಮತ್ತು ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ ಎಸ್.ಇ.ಝಡ್.(ಇಂಧನ) ಮೂಲಕ ಕೆಲವು ವರ್ಷಗಳ ಹಿಂದೆ ಆರಂಭಗೊಂಡ ಸುಜ್ಲಾನ್ ಎನರ್ಜಿ ಇಂಡಿಯಾ ಕಂಪನಿಯು ನಷ್ಟ ಅನುಭವಿಸಿದ ಬಳಿಕ ಕೆ.ಐ.ಎ.ಡಿ.ಬಿ. ಮೂಲಕ ಪಡೆದ 1200ಕ್ಕೂ ಅಧಿಕ ಭೂಮಿಯನ್ನು ಭೂಮಾಫಿಯಾದ ಜತೆ ಶಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವುದನ್ನು ಖಂಡಿಸಿ ಕಾಪು ಬ್ಲಾಕ್ ಕಾಂಗ್ರಸ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಜತೆಗೂಡಿ ಡಿಸೆಂಬರ್ ಡಿ.23 ಶನಿವಾರ ಸುಜ್ಲಾನ್ ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಇಂದು ಕಾಪು ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು, ಸುಜ್ಲಾನ್ ಕಂಪನಿಯು ತೀವ್ರ ನಷ್ಟ ಅನುಭವಿಸಿದಾಗ ಇಸ್ಪಾನ್ ಹೆಸರಲ್ಲಿ ನೂರಾರು ಎಕರೆ ಜಮೀನನ್ನು ವಿವಿಧ ಕಂಪನಿಗಳಿಗೆ ಅಧಿಕ ದರದಲ್ಲಿ ಮಾರಾಟ ಮಾಡಿದ್ದಾರೆ. ಆ ಪೈಕಿ ಕೆಲವು ಕಂಪನಿಗಳು ಪ್ರಾರಂಭಗೊಂಡಿದ್ದರೂ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ. ಅಲ್ಲದೆ ಅದೇ ಭಾಗದಲ್ಲಿರುವ 100 ಎಕರೆ ವಿಸ್ತೀರ್ಣದ ಪ್ರಸಿದ್ಧ ದೇವರ ಕಾಡು ಪ್ರದೇಶವನ್ನೂ ಸಂರಕ್ಷಿಸದೆ ಮಾರಾಟ ಮಾಡಿದ್ದಾರೆ. ಕಾಪು ಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಮನೆ ನಿವೇಶನ ಕೋರಿ ಅರ್ಜಿ ಸಲ್ಲಿಸಿದವರಿ ದ್ದಾರೆ. ಅವರಿಗೆ ನೀಡಲು ಭೂಮಿ ಇಲ್ಲ. ಹಾಗಾಗಿ ಸುಜ್ಲಾನ್ ಜಾಗವನ್ನು ಸರಕಾರ ವಶಪಡಿಸಿಕೊಂಡು ನಿವೇಶನರಹಿತರಿಗೆ ಹಂಚಬೇಕು ಎಂದವರು ಹೇಳಿದ್ದು, ನಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ, ಸಂಬಂಧಿತ ಸಚಿವರು, ಸಂಬಂಧಿತ ಅಧಿಕಾರ ವರ್ಗದವರಿಗೆ ಮನವಿ ಸಲ್ಲಿಸಲಾಗುವುದು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಸಿದ್ದಾರೆ.

ಟೋಲ್ ವಿರುದ್ಧ ಪ್ರತಿಭಟನೆ: ಪಡುಬಿದ್ರಿ-ಕಾರ್ಕಳ ಹೆದ್ದಾರಿಯಲ್ಲಿ ಕಂಚಿನಡ್ಕ ಬಳಿ ಪ್ರಸ್ತಾವನೆಯಲ್ಲಿರುವ ಟೋಲ್ ಸಂಗ್ರಹ ಕೈಬಿಡುವಂತೆಯೂ ಆಗ್ರಹಿಸಲಾಗುವುದು ಎಂದವರು ಹೇಳಿದರು. ಅದೇ ರೀತಿ ಹೆಜಮಾಡಿ ಟೋಲ್‌ನಲ್ಲಿ ಸ್ಥಳೀಯ ಜಿ.ಪಂ. ವ್ಯಾಪ್ತಿಯ ವಾಹನಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಅವರು ಆಗ್ರಹಿಸಿದರು.

ಪಲಿಮಾರು ಕಿಂಡಿ ಅಣೆಕಟ್ಟು: ಕೃಷಿ ಉದ್ದೇಶಕ್ಕಾಗಿ ಪಲಿಮಾರು ಬಳಿ ನಿರ್ಮಿಸಿದ ಕಿಂಡಿ ಅಣೆಕಟ್ಟುವಿನಿಂದ ಸುತ್ತಮುತ್ತದ ಗ್ರಾಮಗಳ ಕೃಷಿಕರಿಗೆ ಹೆಚ್ಚು ಅನುಕೂಲವಾಗಿತ್ತು. ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಳಳವೂ ಆಗಿತ್ತು. ಇದೀಗ ಈ ಕಿಂಡಿ ಅಣೆಕಟ್ಟಿನಿಂದ ಬೃಹತ್ ಕೊಳವೆ ಮೂಲಕ ಸುಜ್ಲಾನ್ ಜಾಗದಲ್ಲಿ ಸ್ಥಾಪನೆಗೊಂಡ ಕೈಗಾರಿಕೆಯೊಂದಕ್ಕೆ ನೀರು ಪೂರೈಸಲು ನಿರ್ಧರಿಸಿದ್ದು ಈ ಬಗ್ಗೆಯೂ ಪ್ರತಿಭಟನೆ ನಡೆಸಲಾಗುವುದು ಎಂದವರು ಹೇಳಿದರು.

ಜಲಜೀವನ್ ಮಿಶನ್ ಅವ್ಯವಹಾರ; ಜಲಜೀವನ್ ಮಿಶನ್ ಯೋಜನೆ ಜಾರಿ ಬಗ್ಗೆ ಸಂದೇಹವಿದೆ. ಯಾವುದೇ ನೀರಿನಾಶ್ರಯಗಳ ಬಗ್ಗೆ ತಿಳಿಯದೆ ಹಲವು ಕೋಟಿ ಅನುದಾನವನ್ನು ಜಲಜೀವನ್ ಮಿಶನ್ ಯೊಜನೆಯ ಪೈಪ್‌ಲೈನ್ ಕಾಮಗಾರಿಗೆ ವಿನಿಯೋಗಿಸಲಾಗಿದೆ. ಅದರೆ ನೀರು ಸರಬರಾಜು ಅಗುತ್ತಿಲ್ಲ. ಈ ಬಗ್ಗೆಯೂ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಲಾಗುವುದು ಎಂದವರು ಹೇಳಿದರು.

ಡಿ.23 ಶನಿವಾರ ಬೆಳಿಗ್ಗೆ 10 ಗಂಟೆಗೆ ಪಕ್ಷಾತೀತ ನೆಲೆಯಲ್ಲಿ ಸಹಸ್ರಾರು ಮಂದಿ ಜತೆಗೂಡಿ ನಂದಿಕೂರು ಬಳಿಯ ಸುಜ್ಲಾನ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಡ್ವೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ತಾ.ಪಂ. ಮಾಜಿ ಸದಸ್ಯ ದಿನೇಶ್ ಕೋಟ್ಯಾನ್ ಪಲಿಮಾರು, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸರ್ಫುದ್ದೀನ್, ಕಾಪು ಪುರಸಭೆ ವ್ಯಾಪ್ತಿ ಅಧ್ಯಕ್ಷ ಸಾದಿಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!