ಕಾರ್ಕಳ: ಅಕ್ರಮ ಮರಳು ಸಾಗಾಟ ಆರೋಪ- ಐವರ ಬಂಧನ
ಕಾರ್ಕಳ, ಡಿ.18: ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಐವರನ್ನು ಕಾರ್ಕಳ ಪೊಲೀಸರು ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ಡಿ.17 ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.
ಲತೀಫ್ ಇಂದ್ರಾಪುರ, ಶಿರ್ವದ ಪ್ರದೀಪ(22), ಸುಬ್ರಹ್ಮಣ್ಯ(20), ಪ್ರವೀಣ (30), ಕೌಶಿಕ್(23) ಬಂಧಿತ ಆರೋಪಿಗಳು. ಇವರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಕಿನ್ನಿಗೊಳಿ ಕಡೆಯಿಂದ ಮುಂಡ್ಕೂರು ಕಡೆಗೆ ಎರಡು ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು, ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.”