ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ?: ಕರಾಚಿ ಆಸ್ಪತ್ರೆಗೆ ದಾಖಲು!
ಕರಾಚಿ(ಪಾಕಿಸ್ತಾನ): ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ, ಆಸ್ಪತ್ರೆ ಸುತ್ತಮುತ್ತ ತೀವ್ರ ಭದ್ರತೆ ಕಲ್ಪಿಸಲಾಗಿದೆ.
ಕ್ರಿಮಿನಲ್ ಚಟುವಟಿಕೆಗಳಿಗೆ ಹೆಸರಾದ ಕುಖ್ಯಾತಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ. ಇದರಿಂದ ಹಠಾತ್ ಆರೋಗ್ಯ ಕೆಟ್ಟು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಕಳೆದ ಎರಡು ದಿನಗಳಿಂದ ವೈದ್ಯಕೀಯ ಆರೈಕೆಯಲ್ಲಿದ್ದು, ವಿಷಪ್ರಾಶನವಾಗಿರಬಹುದು ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ. ಸದ್ಯಕ್ಕೆ, ಆಸ್ಪತ್ರೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ದಾವೂದ್ ಇಬ್ರಾಹಿಂ ಆಸ್ಪತ್ರೆಯ ಮಹಡಿಯಲ್ಲಿ ಏಕೈಕ ನಿವಾಸಿಯಾಗಿದ್ದು, ಉನ್ನತ ಆಸ್ಪತ್ರೆ ಅಧಿಕಾರಿಗಳು ಮತ್ತು ಆತನ ಹತ್ತಿರದ ಕುಟುಂಬ ಸದಸ್ಯರಿಗೆ ಮಾತ್ರ ಪ್ರವೇಶವನ್ನು ಕಲ್ಪಿಸಲಾಗಿದೆ.
ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂಗಾಗಿ ಮುಂಬೈ ಪೊಲೀಸರು ಆತನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಜನವರಿಯಲ್ಲಿ, ದಾವೂದ್ನ ಸಹೋದರಿ ಹಸೀನಾ ಪಾರ್ಕರ್ನ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಭೂಗತ ಲೋಕದ ಡಾನ್ ಎರಡನೇ ಬಾರಿಗೆ ಮದುವೆಯಾದ ನಂತರ ಕರಾಚಿಯಲ್ಲಿ ಉಳಿದುಕೊಂಡಿದ್ದಾನೆ ಎಂದು ತಿಳಿಸಿದ್ದರು.
ಮುಂಬೈನಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 250 ಕ್ಕೂ ಹೆಚ್ಚು ಅಮಾಯಕ ನಾಗರಿಕರು ಮೃತಪಟ್ಟು, 750ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಭೀಕರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಆಗಿದ್ದಾನೆ.ಅಲ್ಲಿಂದ ಆತ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಎನಿಸಿಕೊಂಡಿದ್ದಾನೆ.