ಗರಡಿಗಳಿಗೆ ಮಹಿಳೆಯರು ಅಸ್ಪೃಶ್ಯರಾದ ಬಗ್ಗೆ ಅಧ್ಯಯನ ಅಗತ್ಯ: ಸಾಹಿತಿ ಬಿ.ಎಂ ರೋಹಿಣಿ
ಉಡುಪಿ, ಡಿ.17: ತುಳುನಾಡಿನಲ್ಲಿ ಸಾವಿರಾರು ದೈವಗಳಿವೆ. ಆದರೆ ಕೆಲವು ದೈವಸ್ಥಾನಗಳಿಗೆ ಸ್ತ್ರೀಯರಿಗೆ ಪ್ರವೇಶ ಇಲ್ಲ. ಅಲ್ಲಿ ಸ್ತ್ರೀದೈವ ಇದ್ದರೂ ಕೂಡ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದು ಯಾವಾಗ ಪಾರಂಭವಾಯಿತು ಮತ್ತು ಮಹಿಳೆಯರು ಯಾಕಾಗಿ ಹಾಗೂ ಯಾವ ಕಾರಣಕ್ಕೆ ಅಸ್ಪೃಶ್ಯರಾದರು ಎಂಬುದರ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ಹಿರಿಯ ಸಾಹಿತಿ ರೋಹಿಣಿ ಬಿ.ಎಂ. ಹೇಳಿದ್ದಾರೆ.
ಬನ್ನಂಜೆ ಬಾಬು ಅಮೀನ್- 80 ಅಭಿನಂದನಾ ಸಮಿತಿ ವತಿಯಿಂದ ರವಿವಾರ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾದ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರ 80ರ ಸಂಭ್ರಮ ‘ಸಿರಿತುಪ್ಪೆ’ ಸಮಾರಂಭದಲ್ಲಿ ಅವರ ‘ತುಳುನಾಡ ಸುತ್ತ ಮುತ್ತ’ ಹಾಗೂ ‘ಗರೋಡಿ ಒಂದು ಚಿಂತನೆ’ ಪುಸ್ತಕಗಳನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ತುಳುನಾಡಿನಲ್ಲಿ ಸ್ತ್ರೀ ದೈವಗಳನ್ನು ಆರಾಧನೆ ಮಾಡಲಾಗುತ್ತದೆ. ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಎಲ್ಲ ರೀತಿಯ ಹಕ್ಕು ನೀಡಲಾಗಿದೆ. ಆದರೆ ಅದರ ನಿಯಂತ್ರಣ ಯಾಕ ಕೈಯಲ್ಲಿ ಇರುವುದು ಎಂಬುದನ್ನು ಕೂಡ ನಾವು ಯೋಚನೆ ಮಾಡಬೇಕು. ಸ್ತ್ರೀ ದೈವಗಳು ಇಂದು ಬದಲಾಗುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಗರಡಿಗಳಲ್ಲಿ ಕನ್ನಡಿ ಇಟ್ಟುಕೊಂಡು ನಿಂತ ಮಾಸ್ತಿ ಶಿಲ್ಪ ಗಳಿವೆ. ಮಾಸ್ತಿ ಅಂದರೆ ಪತ್ನಿ ಸತ್ತಾಗ ಪತ್ನಿ ಚಿತೆಗೆ ಹಾರಿ ಪ್ರಾಣ ಬಿಡುವುದು. ಅಂತಹ ಶಿಲ್ಪಗಳು ನಮ್ಮ ಗರಡಿಗಳಲ್ಲಿ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ ನಮ್ಮಲ್ಲಿ ವಿಧವೆಗೂ ಮದುವೆಯಾಗುವ ಅವಕಾಶ ಇದೆ. ಈ ಶಿಲ್ಪಗಳು ಯುದ್ಧದಲ್ಲಿ ಹೋರಾಡಿ ಗೆದ್ದ ಮಹಿಳೆಯರದ್ದು ಆಗಿರಬಹುದು. ಅದೇ ರೀತಿ ಯೋಧರನ್ನು ಸಿದ್ಧಪಡಿಸುವ ಗರಡಿಯಲ್ಲಿ ಹಿಂದೆ ಮಹಿಳೆಯರಿಗೆ ಪ್ರವೇಶ ಇತ್ತೇ ಎಂಬುದು ಕೂಡ ಪ್ರಶ್ನೆಯಾಗಿದೆ. ಆ ಕಾಲದಲ್ಲಿ ಮಹಿಳೆಯರು ಕೂಡ ಯೋಧರಾಗಿದ್ದರೇ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದರು.
ಜನಪದ ಸಂಸ್ಕೃತಿಯು ನಿಂತ ನೀರಾಗಿಲ್ಲ. ನಮ್ಮಲ್ಲಿರುವ ಎಲ್ಲ ಸಂಸ್ಕೃತಿಯನ್ನು ಸಮಾನವಾಗಿ ನೋಡಲು ಅಗತ್ಯ ಇಲ್ಲ. ತುಳು ಹಾಗೂ ಬ್ರಾಹ್ಮಣ ಸಂಸ್ಕೃತಿ ಬೇರೆ ಬೇರೆ ಆಗಿದೆ. ಹೀಗೆ ನಮ್ಮದು ಬಹು ಸಂಸ್ಕೃತಿ ಮತ್ತು ಬಹು ಭಾಷೆಗಳ ನಾಡು. ಬನ್ನಂಜೆ ಬಾಬು ಅಮೀನ್ ತುಳುನಾಡಿನ ತುಳು ಸಂಸ್ಕೃತಿಯನ್ನು ಅಧ್ಯಯನಪೂರ್ಣವಾಗಿ ಕಟ್ಟುಕೊಟ್ಟಿದ್ದಾರೆ. ಇದನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಜಿ.ಶಂಕರ್ ಫ್ಯಾಮಿಟಿ ಟ್ರಸ್ಟ್ನ ಪ್ರವರ್ತಕ ಜಿ.ಶಂಕರ್ ಉದ್ಘಾಟಿಸಿದರು. ಬನ್ನಂಜೆ ಬಾಬು ಅಮೀನ್, ಮುಂಬೈಯ ಅಕ್ಷಯ ಮಾಸ ಪತ್ರಿಕೆಯ ಸಂಪಾದಕ ಹರೀಶ್ ಹೆಜಮಾಡಿ, ಸಮಿತಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಕಾರ್ಯಾಧ್ಯಕ್ಷ ರಘುನಾಥ್ ಮಾಬಿಯಾನ್ ಉಪಸ್ಥಿತರಿದ್ದರು.
ಸಮಿತಿ ಸಂಚಾಲಕ ಭಾಸ್ಕರ್ ಸುವರ್ಣ ಕನ್ನರ್ಪಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಸುರೇಶ್ ಮೆಂಡನ್ ವಂದಿಸಿದರು. ಅರ್ಪಿತಾ ಶೆಟ್ಟಿ ಹಾಗೂ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಹಿದಾಯತುಲ್ಲ ಸಾಹೇಬ್ ಎರ್ಮಾಳು ಅವರಿಂದ ನಾಗಸ್ವರ ವಾದನ, ರವಿಕುಮಾರ್ ಕಪ್ಪೆಟ್ಟುರವರ ಡೋಲು ವಾದನ, ಏಡ್ಮೇರಿನ ಬೊಗ್ಗು ಪರವರಿಂದ ತುಳು ಪಾಡ್ದನದ ನಡೆಯಿತು.