ಕಾರ್ಕಳ: ಡಿ.23 ಜ್ಞಾನಸುಧಾ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

ಕಾರ್ಕಳ: ಅಜೆಕಾ‌ರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ್‌ ರಾಮಾನುಜನ್‌ರವರ ಜನ್ಮದಿನದಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವು ಡಿಸೆಂಬರ್ 23 ರಂದು ಸಂಜೆ 5 ಗಂಟೆಗೆ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಜೆ.ಇ.ಇ. ಅಡ್ವಾನ್ಸ್ ಮೂಲಕ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು, ಜೆ.ಇ.ಇ ಮೈನ್ ಮೂಲಕ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರವೇಶಿಸಿದ ನಾಲ್ವರು ವಿದ್ಯಾರ್ಥಿಗಳನ್ನು, ನೀಟ್ ಪರೀಕ್ಷೆಯ ಮೂಲಕ ಎಂ.ಬಿ.ಬಿ.ಎಸ್ ಪ್ರವೇಶ ಗಳಿಸಿದ 108 ವಿದ್ಯಾರ್ಥಿಗಳನ್ನು, ಕೆ.ಸಿ.ಇ.ಟಿ ಇಂಜಿನಿಯರಿಂಗ್ ನಲ್ಲಿ ಒಂದು ಸಾವಿರದೊಳಗಿನ ರ್ಯಾಂಕ್ ಗಳಿಸಿದ 24 ವಿದ್ಯಾರ್ಥಿಗಳನ್ನು, ಸಿ.ಎ.ಫೌಂಡೇಶನ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಾಧಕರನ್ನು ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವಮಧು ಬಂಗಾರಪ್ಪ ಉದ್ಘಾಟಿಸಲಿರುವರು. ಕಾರ್ಕಳದ ಶಾಸಕ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿರುವರು. ಕಾರ್ಕಳದ ಮಾಜಿ ಶಾಸಕ ದಿ.ಹೆಚ್. ಗೋಪಾಲ ಭಂಡಾರಿ ಅವರ ಪತ್ನಿ ಪ್ರಕಾಶಿನಿ. ಜಿ. ಭಂಡಾರಿ, ಉಡುಪಿಯ ಶಾಸಕರು ಮತ್ತು ದ.ಕ ಹಾಗೂ ಉಡುಪಿ ಜಿಲ್ಲಾ ಕೋ-ಅಪರೇಟಿವ್ ಫಿಶ್ ಮಾರ್ಕೆಟಿಂಗ್ ಫೆಡರೇಶನ್ ಮಂಗಳೂರು ಇದರ ಅಧ್ಯಕ್ಷ ಯಶ್‌ಪಾಲ್‌.ಎ.ಸುವರ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಎ.ಪಿ.ಜಿ.ಇ.ಟಿ.ಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!