ಉಡುಪಿ: ಸಭೆ, ಸಮಾರಂಭಗಳಲ್ಲಿ ಮರುಬಳಕೆಯ ವಸ್ತುಗಳನ್ನು ಬಳಸಲು ಸೂಚನೆ
December 16, 2023
ಉಡುಪಿ,ಡಿ.16:ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮನೆ,ಮದುವೆ ಹಾಲ್,ಹೊಟೇಲ್‌ಗಳಲ್ಲಿ ಸಮಾರಂಭ ಮಾಡುವಾಗ ಹಾಗೂ ರಸ್ತೆ ಬದಿ ಟೀ,ಕಾಫಿ,ತಿಂಡಿ ಮಾರಾಟ ಮಾಡುವವರು ರಾಜ್ಯ ಸರ್ಕಾರದ ನಿರ್ದೇಶನದಂತೆ ರೆಡ್ಯೂಸ್,ರೀಯೂಸ್ ಹಾಗೂ ರೀಸೈಕಲ್ ಮಾದರಿಯಲ್ಲಿ ಮರುಬಳಕೆಯ ವಸ್ತುಗಳಾದ ಸ್ಟೀಲ್ ಲೋಟ,ಸ್ಟೀಲ್ ತಟ್ಟೆಗಳನ್ನು ಕಡ್ಡಾಯವಾಗಿ ಬಳಸಿ ತ್ಯಾಜ್ಯವನ್ನು ಕಡಿಮೆ ಮಾಡಬೇಕು ಹಾಗೂ ಪ್ರಸ್ತುತ ಬಳಸುತ್ತಿರುವ ಪೇಪರ್ ಪ್ಲೇಟ್,ಪೇಪರ್ ಗ್ಲಾಸ್ ಮತ್ತು ಟಿಶ್ಯೂಗಳನ್ನು ಬಳಸಬಾರದು.
ಉಡುಪಿ ನಗರವನ್ನು ಕಸ ಮುಕ್ತ ನಗರವನ್ನಾಗಿಸಲು,ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆ ಮಾಡಲು ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸಬೇಕು. ಉದ್ದಿಮೆದಾರರು,ವ್ಯಾಪಾರಸ್ಥರು,ಫಾಸ್ಟ್ ಫುಡ್ ಅಂಗಡಿಯವರು ಪೇಪರ್ ಪ್ಲೇಟ್,ಪೇಪರ್ ಗ್ಲಾಸ್ ಮತ್ತು ಟಿಶೂಗಳನ್ನು ಡಿಸೆಂಬರ್ 31 ರ ಒಳಗೆ ಖಾಲಿಮಾಡಬೇಕು.ನಂತರ ಮಾರಾಟ ಮಾಡುವುದು ಕಂಡು ಬಂದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸುವುದರೊಂದಿಗೆ ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.