“ರಜತ ಸಂಭ್ರಮದಲ್ಲಿ ವಿಶ್ವಾಸದ ಮನೆ”- ಮಾದಕವ್ಯಸನಿಗಳ ಪುನರ್ವಸತಿ ಕೇಂದ್ರ ಆರಂಭಕ್ಕೆ ಯೋಜನೆ
ಉಡುಪಿ: ಕಾಪು ತಾಲೂಕು ಶಂಕರಪುರದಲ್ಲಿ ಕಾರ್ಯಾಚರಿಸುತ್ತಿರುವ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಹಾಗೂ ಅನಾಥಾಶ್ರಮ ‘ವಿಶ್ವಾಸದಮನೆ’ ಈಗ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಥೆಯ ರಜತ ಮಹೋತ್ಸವ ಸಮಾರಂಭ ಡಿ.20ರಿಂದ ಮೂರು ದಿನ ನಡೆಯಲಿದೆ ಎಂದು ವಿಶ್ವಾಸದಮನೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಪಾಸ್ಟರ್ ಸುನೀಲ್ ಜಾನ್ ಡಿಸೋಜ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಈ ಕೇಂದ್ರದಲ್ಲಿ ಬೀದಿಗೆ ಬಿದ್ದು ಅಲೆದಾಡುತಿದ್ದ ಮಹಿಳೆಯರು ಹಾಗೂ ಪುರುಷ ಮಾನಸಿಕ ಅಸ್ವಸ್ಥರು, ನಿರ್ಗತಿಕರು, ನಿರಾಶ್ರಿತರು, ಅನಾಥರು, ವೃದ್ಧರು ಹಾಗೂ ಅಂಗವಿಕಲರು ಆಶ್ರಯ ಪಡೆದಿದ್ದಾರೆ. ವಿಶ್ವಾಸದ ಮನೆ ಸೇವಾಶ್ರಮದಲ್ಲಿ ಇವರಿಗೆ ಉಚಿತ ವಸತಿ, ಊಟ, ಬಟ್ಟೆಬರೆ ಹಾಗೂ ವೈದ್ಯಕೀಯ ಶುಶ್ರೂಷೆಗಳನ್ನು ನೀಡಲಾಗುತ್ತಿದೆ ಎಂದರು.
ಶಂಕರಪುರ ವಿಶ್ವಾಸದ ಮನೆಯಲ್ಲಿ ಇದುವರೆಗೆ 900ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದು, ಇವರಲ್ಲಿ 800ಕ್ಕೂ ಅಧಿಕ ಮಂದಿ ಮಾನಸಿಕ ಅಸ್ವಸ್ಥರು ಸಂಪೂರ್ಣ ಗುಣಮುಖರಾಗಿ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ. ಇಲ್ಲಿ ಆಶ್ರಯ ಪಡೆದು ಗುಣಮುಖರಾಗಿರುವ ಅನೇಕರು ಇನ್ನೂ ಕುಟುಂಬಿಕರ ವಿಳಾಸ ಪತ್ತೆ ಮಾಡಲಾಗದೇ ಉಳಿದುಕೊಂಡಿದ್ದಾರೆ ಎಂದು ಫಾ.ಸುನೀಲ್ ಡಿಸೋಜ ತಿಳಿಸಿದರು.
ಇವರನ್ನು ಕೂಡಾ ಮನೆ ತಲುಪಿಸುವ ಪ್ರಯತ್ನ ಜಾರಿಯಲ್ಲಿದೆ. ವಿಶ್ವಾಸದ ಮನೆಯಲ್ಲಿ ದೇಶದ ಬೇರೆ ಬೇರೆ ರಾಜ್ಯಗಳಾದ ಒರಿಸ್ಸಾ, ಪಂಜಾಬ್, ಗುಜರಾತ್, ಕೇರಳ, ತುಳುನಾಡು, ಅಸ್ಸಾಂ, ಉತ್ತರ ಪ್ರದೇಶ, ರಾಜಸ್ಥಾನ್, ಬಿಹಾರ್, ಮಹಾರಾಷ್ಟ್ರ, ಮುಂಬೈ, ಪೂನಾ, ನಾಸಿಕ್, ಬೆಂಗಳೂರು, ಕೊಲ್ಕತ್ತ ಹಾಗೂ ಇತರ ರಾಜ್ಯಗಳ ಅನಾಥರು ಆಶ್ರಯ ಪಡೆಯುತ್ತಿದ್ದಾರೆ. ತೀವ್ರತರದ ಕಾಯಿಲೆಯಿಂದ ಬಳಲುತ್ತಿರುವವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಅವರ ಶುಶ್ರೂಷೆಯನ್ನು ನೋಡಿಕೊಳ್ಳಲಾಗುತ್ತದೆ ಎಂದರು.
ಅಲ್ಲದೇ ಈ ಸಂಸ್ಥೆಯು ಬಡ ಹಾಗೂ ನಿರ್ಗತಿಕರ ಹೆಣ್ಣು ಹಾಗೂ ಗಂಡು ಮಕ್ಕಳಿಗಾಗಿ ವಸತಿ ಗೃಹಗಳನ್ನು ನಡೆಸುತ್ತಿದೆ. ಮಕ್ಕಳಿಗೆ ಉಚಿತ ವಸತಿ, ವಿದ್ಯಾಭ್ಯಾಸ, ಊಟೋಪಚಾರ ನೀಡಲಾಗುತ್ತಿದೆ. ಅನೇಕ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆದು ಉನ್ನತ ಭವಿಷ್ಯ ಕಂಡುಕೊಂಡಿದ್ದಾರೆ. ಸದ್ಯ ಇಲ್ಲಿ 140ರಷ್ಟು ಮಂದಿ ಆಶ್ರಯ ಪಡೆದಿದ್ದಾರೆ ಎಂದು ವಿವರಿಸಿದರು.
ವಿಶ್ವಾಸದಮನೆ ಪುನರ್ವಸತಿ ಕೇಂದ್ರಕ್ಕೆ ಇದೀಗ ರಜತ ಮಹೋತ್ಸವದ ಸಂಭ್ರಮ. ಇದರೊಂದಿಗೆ ಡಿ.ಜಿ.ಎಂ. ಬೇತೆಲ್ ಚರ್ಚ್ ಯೇಸುಪುರ ಇದರ ರಜತ ಮಹೋತ್ಸವ ಮತ್ತು ಆಸರೆ ಟಿವಿ ಚಾನೆಲ್ನ 8ನೇ ವಾರ್ಷಿಕೋತ್ಸವ ಸಮಾರಂಭವು ಡಿ.20, 21ಮತ್ತು 22 ಮೂರು ದಿನಗಳ ಕಾಲ ಶಂಕರಪುರದ ಕ್ಯಾನರಿ ಗಾರ್ಡನ್ನಲ್ಲಿ ನಡೆಯಲಿದೆ ಎಂದರು.
ಉಸ್ತುವಾರಿ ಸಚಿವರಿಂದ ಉದ್ಘಾಟನೆ: ರಜತ ಮಹೋತ್ಸವವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಡಿ.20ರ ಸಂಜೆ 4ಗಂಟೆಗೆ ಉದ್ಘಾಟಿಸಲಿದ್ದಾರೆ. ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿರುವರು. ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಡಿಎಚ್ಓ ಡಾ.ಐ.ಪಿ.ಗಡಾದ ಮುಂತಾದವರು ಭಾಗವಹಿಸಲಿ ದ್ದಾರೆ ಎಂದರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಬಹುಭಾಷಾ ನಟ ಸುಮನ್ ತಲ್ವಾರ್, ತುಳು ಚಿತ್ರನಟ ಅರವಿಂದ್ ಬೋಳಾರ್, ಉದ್ಯಮಿ ಮನೋಹರ್ ಶೆಟ್ಟಿ, ಪ್ರಶಾಂತ್ ಜತ್ತನ್ನ, ಕೇರಳದ ಸಭಾಪಾಲಕರಾದ ಪ್ರೊಫೆಟ್ ಸ್ರೀಜಿತ್ ಕೆ ಮುಂತಾದವರು ಪಾಲ್ಗೊಳ್ಳುವರು ಎಂದರು.
ಸಮಾಜ ಸೇವಕರಿಗೆ ಸನ್ಮಾನ: ಇದೇ ವೇಳೆ ಜಿಲ್ಲೆಯ ಸಮಾಜ ಸೇವಕರಾದ ರೋಶನ್ ಬೆಳ್ಮಣ್, ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ಈಶ್ವರ್ ಮಲ್ಪೆ, ರವಿ ಕಟಪಾಡಿ, ಆಸಿಫ್ ಆಪತ್ಭಾಂದವ, ಸೂರಿ ಶೆಟ್ಟಿ ಕಾಪು, ವಿನಯ್ ಸಾಸ್ತಾನ, ತನುಲಾ ಇವರನ್ನು ಸನ್ಮಾನಿಸಲಾಗುವುದು ಎಂದು ಪಾಸ್ಟರ್ ಸುನೀಲ್ ಜಾನ್ ಡಿಸೋಜಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಫಾ. ಮ್ಯಾಥ್ಯೂ ಕ್ಯಾಸ್ಟಲಿನೋ, ಫಾ.ಪ್ರಶಾಂತ್ ಮಾಬೆನ್ ಹಾಗೂ ಎಡ್ವರ್ಡ್ ಮಿನೇಜಸ್ ಉಪಸ್ಥಿತರಿದ್ದರು.
ಪುನರ್ವಸತಿ ಕೇಂದ್ರ ಪ್ರಾರಂಭ
ವಿಶ್ವಾಸದ ಮನೆ ತನ್ನ ವಿಸ್ತರಣಾ ಯೋಜನೆಯನ್ನು ಹಾಕಿಕೊಂಡಿದ್ದು, ಮಾದಕ ದ್ರವ್ಯ ವ್ಯಸನಿಗಳಿಗಾಗಿ ಪುನರ್ವಸತಿ ಕೇಂದ್ರವೊಂದನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿದೆ. ಇದರ ಶಂಕುಸ್ಥಾಪನೆಯೂ ಇದೇ ಸಂದರ್ಭ ದಲ್ಲಿ ನಡೆಯಲಿದೆ ಎಂದು ಫಾ. ಸುನೀಲ್ ಡಿಸೋಜ ತಿಳಿಸಿದರು.
ಕೇಂದ್ರವು 100 ಹಾಸಿಗೆ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದಕ್ಕಾಗಿ ಸಾರ್ವಜನಿಕರಿಂದ ಧನ ಸಹಾಯವನ್ನು ತಾವು ನಿರೀಕ್ಷಿಸುವುದಾಗಿ ಅವರು ತಿಳಿಸಿದರು.