ಕರಾವಳಿಗರಿಂದ ನಿರ್ಮಾಣಗೊಂಡ ಕಲಾತ್ಮಕ ಚಿತ್ರ ‘ಧ್ವಮ್ದ್ವ’; ಅಂ.ರಾ.ಚಿತ್ರೋತ್ಸವಗಳಿಗಾಗಿ ತಯಾರಾದ ಚಿತ್ರ

ಉಡುಪಿ, ಡಿ.15: ಸುಶಾಂತ್ ಅವರ ವಿಶಿಷ್ಟ ಕನ್ನಡ ಕಾದಂಬರಿ ‘ದೀಪವಿರದ ದಾರಿಯಲ್ಲಿ’ ಆಧಾರದಲ್ಲಿ ಕಲಾತ್ಮಕ ಕನ್ನಡ ಚಿತ್ರವೊಂದು ನಿರ್ಮಾಣಗೊಂಡಿದ್ದು, ಅದಕ್ಕೆ ‘ದ್ವಮ್ದ್ವ’ (ದ್ವಂದ್ವ) ಎಂದು ಹೆಸರಿಡಲಾಗಿದೆ ಎಂದು ಚಿತ್ರದ ನಿರ್ದೇಶಕ ಕ್ಲಿಂಗ್ ಜಾನ್ಸನ್ ಹೇಳಿದ್ದಾರೆ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅಗ್ನಿಶಾಮಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಿಂಗ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಕಲಾತ್ಮಕ ಚಿತ್ರವಾದ ಇದನ್ನು ತಾವು ಥಿಯೇಟರ್‌ಗಳಲ್ಲಿ ಬಿಡುಗಡೆ ಗೊಳಿಸಲು ಆಸಕ್ತಿ ಹೊಂದಿಲ್ಲ. ಸದ್ಯ ಕೇವಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಇದನ್ನು ಸೀಮಿತಗೊಳಿಸಿದ್ದೇವೆ ಎಂದರು.

ಇದುವರೆಗೆ ಟೊರೆಂಟೊ, ಮೆಲ್ಬೋರ್ನ್ ಸೇರಿದಂತ ಸುಮಾರು 13 ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಇದು ಆಯ್ಕೆಗೊಂಡಿದೆ ಎಂದ ಅವರು, ಇತ್ತೀಚೆಗೆ ಚಿತ್ರವು ಯು/ಎ ಸೆನ್ಸಾರ್ ಪಡೆದು ಪ್ರದರ್ಶನಕ್ಕೆ ಸಿದ್ಧವಾಗಿದೆ ಎಂದರು.

ಕರಾವಳಿಯ ಯಕ್ಷಗಾನವನ್ನು ಕೇಂದ್ರೀಕರಿಸಿಕೊಂಡು ನಡೆಯುವ ಕಥೆಗೆ ಒಂದು ಮೊಟ್ಟೆ ಕಥೆ ಖ್ಯಾತಿಯ ಸಿತೇಶ್ ಸಿ.ಗೋವಿಂದ್ ಚಿತ್ರಕಥೆ ಬರೆದು ನಿರ್ಮಾಣದ ಉಸ್ತುವಾರಿ ನೋಡಿಕೊಂಡಿದ್ದಾರೆ. ಸಂಗೀತ ಗಿರಿಧರ್ ದಿವಾನ್ ಅವರದು ಎಂದರು.

ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳನ್ನು ನಿರ್ವಹಿಸುವ ಸುಕೇಶ್ ಎಂಬವರ ಜೀವನದ ಸುತ್ತ ನಡೆಯುವ ಘಟನೆಗಳೇ ಚಿತ್ರದ ಜೀವಾಳವಾಗಿದ್ದು, ಅವರ ದ್ವಂದ್ವ ಬದುಕನ್ನು ತೆರೆದಿಡುತ್ತದೆ. ಯಕ್ಷಗಾನವೂ ಚಿತ್ರದಲ್ಲಿ ಪ್ರಮುಖವಾಗಿ ಬರುತ್ತದೆ ಎಂದರು. ಜೂನ್ ಬಳಿಕ ಎನ್‌ಎಫ್‌ಡಿಸಿಯೊಂದಿಗೆ ಮಾತುಕತೆ ನಡೆಸುತ್ತೇವೆ. ಹಂಚಿಕೆದಾರರು ದೊರೆತರೆ ಚಿತ್ರವನ್ನು ಥಿಯೇಟರ್‌ ಗಳಲ್ಲಿ ಬಿಡುಗಡೆ ಮಾಡುತ್ತವೆ. ಇಲ್ಲದಿದ್ದರೆ ಚಿತ್ರೋತ್ಸವದಲ್ಲಿ ಹಾಗೂ ಖಾಸಗಿ ಪ್ರದರ್ಶನ ನಡೆಸಲಾಗುತ್ತದೆ ಎಂದು ಕ್ಲಿಂಗ್ ಜಾನ್ಸನ್ ನುಡಿದರು.

ಚಿತ್ರವನ್ನು ಪದ್ಮಶ್ರೀ ಮಂಜಮ್ಮ ಜೋಗತಿ, ಅಕ್ಕಾಯ್ಯ ಪದ್ಮಶಾಲಿ ಮುಂತಾದವರು ಹೆಸರಾಂತ ಕಲಾವಿದರಿಗೆ ಸಮರ್ಪಿಸಲಾಗಿದೆ. ಇದರ ಹೆಚ್ಚಿನ ಕಲಾವಿದರು ಕಾಂತಾರ ಚಿತ್ರದಲ್ಲಿ ನಟಿಸಿದವರೇ ಆಗಿದ್ದಾರೆ ಎಂದರು.

ಬೆನ್ಸು ಪೀಟರ್, ರಾಜೇಂದ್ರ ನಾಯಕ್, ಚಂದ್ರಹಾಸ ಉಳ್ಳಾಲ್, ಭಾಸ್ಕರ ಮಣಿಪಾಲ, ಪ್ರಭಾಕರ ಕುಂದರ್, ರಾಧಿಕಾ, ಮಂಗೇಶ್ ಭಟ್, ರಘು ಪಾಂಡೇಶ್ವರ, ಶ್ರೀಪಾದ ಹೆಗ್ಡೆ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ ಎಂದರು. ಚಿತ್ರದ ನಟ ಬೆನ್ಸು ಪೀಟರ್, ಚಿತ್ರಕಥೆ ಬರೆದ ಸಿತೇಶ್ ಗೋವಿಂದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!