ನೇಜಾರು ಹತ್ಯೆ ಪ್ರಕರಣ – ಆರೋಪಿ ಪ್ರವೀಣ್ ಚೌಗುಲೆಯಿಂದ ಜಾಮೀನು ಅರ್ಜಿ ಸಲ್ಲಿಕೆ
ಉಡುಪಿ, ಡಿ.15: ನೇಜಾರು ತಾಯಿ ಮತ್ತು ಮಕ್ಕಳ ಕಗ್ಗೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ (39) ಜಾಮೀನು ಕೋರಿ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಡಿ.14ರಂದು ಅರ್ಜಿ ಸಲ್ಲಿಸಿದ್ದಾಗಿ ತಿಳಿದುಬಂದಿದೆ.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ಪರ ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಧೀಶ ದಿನೇಶ್ ಹೆಗ್ಡೆ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದಾರೆ. ಅದರಂತೆ ಡಿ.20 ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿ ಸರಕಾರಿ ಅಭಿಯೋಜಕ ಪ್ರಕಾಶ್ ಚಂದ್ರ ಶೆಟ್ಟಿ ಅವರಿಗೆ ನೋಟೀಸ್ ನೀಡಲಾಗಿದೆ.
ನ.12ರಂದು ನೇಜಾರು ತೃಪ್ತಿ ಲೇಔಟ್ನಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ನ.14ರಂದು ಬಂಧಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯ ನ್ಯಾಯಾಂಗ ಬಂಧನ ಅವಧಿ ಡಿ.18ರವರೆಗೆ ವಿಸ್ತರಿಸಲಾಗಿದೆ. ಈತನಿಗೆ ನ್ಯಾಯಾಲಯ ಸರಕಾರಿ ವಕೀಲ ರಾಜು ಪೂಜಾರಿ ಅವರನ್ನು ನೇಮಕ ಮಾಡಿತ್ತು.