ಉಡುಪಿ ಯೂನಿಯನ್ ಬ್ಯಾಂಕ್: ಗ್ರಾಹಕರ ಸಮಾವೇಶ
ಉಡುಪಿ, ಡಿ.15: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿ ಶಾಖೆಯ ವತಿಯಿಂದ ಗ್ರಾಹಕರ ಸಮಾವೇಶವು ಶುಕ್ರವಾರ ಉಡುಪಿ ಶಾಖೆಯಲ್ಲಿ ಜರಗಿತು.
ಬ್ಯಾಂಕಿನ ಉಡುಪಿ ಪ್ರಾದೇಶಿಕ ವಲಯದ ಮುಖ್ಯಸ್ಥ ಹಾಗೂ ಸಹಾಯಕ ಮಹಾ ಪ್ರಬಂಧಕ ನರೇಶ್ ಕುಮಾರ್ ವೈ ಮಾತನಾಡಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವುದು ನಮ್ಮ ಆದ್ಯತೆಯಾಗಿದೆ.
ಯಾವುದೇ ಲೋಪಗಳಿದ್ದರೂ ಮುಕ್ತವಾಗಿ ನಮ್ಮೊಂದಿಗೆ ಹಂಚಬಹುದಾಗಿದೆ. ಉತ್ತಮ ಕಾರ್ಯಗಳ ಮೂಲಕ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವುದು ಮುಖ್ಯ ಎಂದು ತಿಳಿಸಿದರು. ಉತ್ತಮ ಗ್ರಾಹಕರಿಂದಲೇ ನಮ್ಮ ಬ್ಯಾಂಕ್ ಜನಸ್ನೇಹಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಗ್ರಾಹಕರನ್ನು ಗೌರವಿಸಲಾಯಿತು. ಉಡುಪಿ ಶಾಖೆಯ ಮುಖ್ಯ ಪ್ರಬಂಧಕ ವೆಂಕಟೇಶ್ ಬಿ.ವಿ. ಮಾತನಾಡಿದರು. ಸಿಬ್ಬಂದಿ ನಾಗೇಶ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.