ಜೀವನ ಅಂತ್ಯಗೊಳಿಸಲು ಅನುಮತಿ ಕೋರಿ ನ್ಯಾಯಾಧೀಶೆಯ ಬಹಿರಂಗ ಪತ್ರ: ವರದಿ ಕೇಳಿದ ಸಿಜೆಐ

ಹೊಸದಿಲ್ಲಿ: ಉತ್ತರ ಪ್ರದೇಶದ ಮಹಿಳಾ ನ್ಯಾಯಾಧೀಶೆಯೊಬ್ಬರು ತಮಗೆ ಹಿರಿಯ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳವಾಗುತ್ತಿದೆ, ಆತ್ಮಹತ್ಯೆಗೆ ಅವಕಾಶ ನೀಡಿ ಎಂದು ಹೇಳಿಕೊಂಡು ಬರೆದ ಬಹಿರಂಗ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬೆನ್ನಲ್ಲೇ ಇದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ಈ ಕುರಿತು ವರದಿ ಕೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳನ್ನುದ್ದೇಶಿಸಿ ಬರೆದ ಪತ್ರದಲ್ಲಿ ಬಂಡಾ ಎಂಬಲ್ಲಿನ ಮಹಿಳಾ ನ್ಯಾಯಾಧೀಶೆ, ತಮಗೆ ಗೌರವಯುತವಾಗಿ ಜೀವನ ಅಂತ್ಯಗೊಳಿಸಲು ಅನುಮತಿಸಬೇಕು ಎಂದಿದ್ದರು. ಜಿಲ್ಲಾ ನ್ಯಾಯಾಧೀಶರು ಮತ್ತು ಕೆಲವರು ಬರಾಬಂಕಿಯಲ್ಲಿ ಕರ್ತವ್ಯ ನಿರ್ವಹಿಸಿದ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಎಂದೂ ಅವರು ಹೇಳಿಕೊಂಡಿದ್ದರು.

“ನನಗೆ ತೀರಾ ಲೈಂಗಿಕ ಕಿರುಕುಳ ನೀಡಲಾಗಿತ್ತು. ಕಸದಂತೆ ನೋಡಿಕೊಳ್ಳಲಾಗಿತ್ತು. ಯಾರಿಗೂ ಬೇಡವಾದ ಕೀಟದಂತೆ ಅನಿಸುತ್ತದೆ,” ಎಂದು ಪತ್ರದಲ್ಲಿ ಹೇಳಲಾಗಿತ್ತು.

ಸಿಜೆಐ ಸೂಚನೆಯಂತೆ ಸುಪ್ರೀಂ ಕೋರ್ಟ್‌ ಕಾರ್ಯದರ್ಶಿ ಅತುಲ್‌ ಎಂ ಕುರ್ಹೆಕರ್‌ ಅವರು ಅಲಹಾಬಾದ್‌ ಹೈಕೋರ್ಟಿನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಪತ್ರ ಬರೆದು ಇಂದೇ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ತನ್ನ ದೂರಿನ ಆಧಾರದಲ್ಲಿ ಹೈಕೋರ್ಟಿನ ಆಂತರಿಕ ದೂರುಗಳ ಸಮಿತಿ ಜುಲೈ 2023ರಲ್ಲಿಯೇ ತನಿಖೆ ನಡೆಸಿತ್ತಾದರೂ ಅದು ಕೇವಲ ನೆಪ ಮಾತ್ರ ಆಗಿತ್ತು ಎಂದು ಸಂತ್ರಸ್ತೆ ಹೇಳಿದ್ದಾರೆ. ಈ ತನಿಖೆಯಲ್ಲಿ ಆರೋಪಿತ ಜಿಲ್ಲಾ ನ್ಯಾಯಾಧೀಶರ ಕಿರಿಯ ಸಹೋದ್ಯೋಗಿಗಳೇ ಸಾಕ್ಷಿಯಾಗಿರುವುದರಿಂದ ಅವರು ಹೇಗೆ ತಮ್ಮ ಮೇಲಧಿಕಾರಿ ವಿರುದ್ಧ ಸಾಕ್ಷ್ಯ ನುಡಿಯುತ್ತಾರೆ ಎಂದು ಆಕೆ ಪ್ರಶ್ನಿಸಿದ್ದಾರೆ.

ತನಿಖೆ ಮುಗಿಯುವ ತನಕ ನ್ಯಾಯಾಧೀಶರನ್ನು ವರ್ಗಾವಣೆಗೊಳಿಸಬೇಕೆಂದೂ ಅವರು ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!