ಬಿಜೆಪಿ ಸಭೆಗೆ ಚಕ್ಕರ್, ಕಾಂಗ್ರೆಸ್ ಔತಣಕೂಟಕ್ಕೆ ಹಾಜರ್: ‘ಕೈ’ ಹಿಡಿಯಲು ಸೋಮಶೇಖರ್, ಹೆಬ್ಬಾರ್ ಸಜ್ಜು!
ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಅಸಮಾಧನದ ಹೊಗೆಯಾಡುತ್ತಿರುವ ಹೊತ್ತಲ್ಲೇ ಬಿಜೆಪಿ ಪ್ರಮುಖ ನಾಯಕರಿಬ್ಬರು ಕಾಂಗ್ರೆಸ್ ಔತಣಕೂಟದಲ್ಲಿ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ ಬುಧವಾರ ರಾತ್ರಿ ಏರ್ಪಡಿಸಿದ ಔತಣಕೂಟದಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ ಸೋಮಶೇಖರ್ ಮತ್ತು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಭಾಗವಹಿಸಿದರು. ಈಗಾಗಲೇ ಬಿಜೆಪಿ ಸಭೆಗಳಿಂದ ದೂರ ಉಳಿದಿರುವ ಅವರು, ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿದೆ.
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳುವ ನೆಪದಲ್ಲಿ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಈಇಬ್ಬರೂ ಶಾಸಕರು,ಬುಧವಾರ ರಾತ್ರಿ ಪಕ್ಷದ ಶಾಸಕರ ಜೊತೆ ಭೋಜನಕೂಟದಲ್ಲಿ ಭಾಗವಹಿಸಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅದಕ್ಕೂ ಮೊದಲು ಕಾಂಗ್ರೆಸ್ ಶಾಸಕರ ಸಭೆ ನಡೆಯಿತು. ವಿಧಾನಸಭೆ ತಡವಾಗಿ ಮುಕ್ತಾಯವಾದ ಕಾರಣ ಎಲ್ಲ ಶಾಸಕರು ಬಂದು ಸೇರುವುದು ವಿಳಂಬವಾಯಿತು. ಹೀಗಾಗಿ ವಿಳಂಬವಾಗಿ ಸಭೆ ಆರಂಭವಾಯಿತು. ಸಭೆಯಲ್ಲಿ ಸೋಮಶೇಖರ್ ಮತ್ತು ಹೆಬ್ಬಾರ್ ಭಾಗವಹಿಸಲಿಲ್ಲ. ಆದರೆ, ಭೋಜನದಲ್ಲಿ ಎಲ್ಲರ ಜೊತೆ ಭಾಗವಹಿಸಿದರು ಎಂದೂ ಮೂಲಗಳು ಹೇಳಿವೆ.
ಮುಂಬರುವ ಲೋಕಸಭೆ ಚುನಾವಣೆಗೆ ಎಲ್ಲ ರೀತಿಯಲ್ಲೂ ಸಿದ್ಧರಾಗುವಂತೆ ಸಭೆಯಲ್ಲಿ ಶಾಸಕರಿಗೆ ಸಲಹೆ ನೀಡಲಾಯಿತು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಘೋಷಿಸಿದ ‘ಗ್ಯಾರಂಟಿ’ ಯೋಜನೆಗಳು ಯಶಸ್ವಿಯಾಗಿವೆ. ಈ ಯೋಜನೆಗಳ ಬಗ್ಗೆ ಜನವರಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮತ್ತು ವಿಧಾನ ಸಭಾ ಕ್ಷೇತ್ರವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ‘ಗ್ಯಾರಂಟಿ’ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳನ್ನು ಒಂದೆಡೆ ಸೇರಿಸಬೇಕು. ಆ ಮೂಲಕ, ಲೋಕಸಭಾ ಚುನಾವಣೆಗೆ ಸಜ್ಜಾಗಬೇಕು ಎಂದು ಸಭೆಯಲ್ಲಿ ಶಾಸಕರಿಗೆ ಸಲಹೆ ನೀಡಲಾಗಿದೆ.
ಬಿಜೆಪಿಯಲ್ಲಿ ಅಸಮಾಧನಗೊಂಡಿರುವ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆಯ ನಡುವೆಯೇ ಕಾಂಗ್ರೆಸ್ ಔತಣಕೂಟದಲ್ಲಿ ಭಾಗಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.