ಇಂದು ಮತ್ತು ನಾಳೆ (ಡಿ. 14-15) ರಾತ್ರಿ ಉಲ್ಕೆಗಳ ವರ್ಷಧಾರೆ

ಉಡುಪಿ: ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ ಮಿಥುನ ರಾಶಿಯಿಂದ ಚಿಮ್ಮುವ “ಜೆಮಿನಿಡ್ “ ಉಲ್ಕಾಪಾತ ಇಂದು ಮತ್ತು ನಾಳೆ ಮಧ್ಯ ರಾತ್ರಿಯಿಂದ ವಿಜೃಂಭಿಸಲಿದೆ.

ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸುವವಾದರೂ ಎಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ. ಆದರೆ, ಇಂದು ನೂರಕ್ಕಿಂತಲೂ ಹೆಚ್ಚು ಬಣ್ಣ ಬಣ್ಣದ ಉಲ್ಕೆಗಳನ್ನು ನೋಡಿ ಆನಂದಿಸಬಹುದು.

ಈ ಉಲ್ಕೆಗಳು ಹೆಚ್ಚಿನವು ಸೂರ್ಯನ ಸುತ್ತುವ ಧೂಮಕೇತುಗಳ ಧೂಳು. ಆದರೆ ಇಂದಿನ ಜೆಮಿನಿಡ್ ಹಾಗಲ್ಲ. ಇದೊಂದು ದೀರ್ಘ ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುವ ಸುಮಾರು 6 ಕಿಮೀ ಗಾತ್ರದ ಕಲ್ಲುಂಡೆಯ 3200 ಪೇಥಾನ್ (Phaethon asteroid) ಆಸ್ಟೆರೈೂಯ್ಡ್ ನ ಧೂಳು.

ಇಂದು ರಾತ್ರಿ ಸುಮಾರು 1 ಗಂಟೆಗೆ ನಡು ನೆತ್ತಿಗೆ ಬರುವ ಮಿಥುನ ರಾಶಿಯಿಂದ ಗಂಟೆಗೆ 120 ಉಲ್ಕೆಗಳನ್ನು ಗುರುತಿಸಬಹುದೆಂದುಅಂದಾಜಿಸಿದ್ದಾರೆ. ಬೇರೆಲ್ಲಾ ಉಲ್ಕಾಪಾತಗಳಿಗಿಂತ ಇದು ವಿಭಿನ್ನ. ಇಂದು ಎಲ್ಲಾ ಬಣ್ಣಗಳ ಉಲ್ಕೆಗಳನ್ನೂ ನೋಡಬಹುದು. ಬಿಳಿ, ಕೆಂಪು, ಹಳದಿ, ಹಸಿರು ಹಾಗೂ ನೀಲಿ.

ನಮ್ಮ ಮೇಲೆಯೇ ಬಿತ್ತು ಅಂತ ಅನಿಸುವ ಈ ಉಲ್ಕಾಪಾತಗಳು ಹಾಗೇನೂ ಅಲ್ಲ. ಭೂ ವಾತಾವರಣದಿಂದಾಗಿ ಸುಮಾರು 60 – 70 ಕಿಮಿ ಎತ್ತರದ ಆಕಾಶದಲ್ಲೇ ಈ ಧೂಳಿನ ಕಣಗಳು ಘರ್ಷಣೆಯಿಂದ ಉರಿದು ಹೋಗುತ್ತವೆ.

ಮಿಥುನ ರಾಶಿಯೇ ನೋಡಲು ಚೆಂದ. ಮಹಾವ್ಯಾಧ ನಕ್ಷತ್ರ ಪುಂಜವೇ ಚೆಂದ. ಅದರ ಪಕ್ಕ ಇರುವ ಪುನರ್ವಸು ನಕ್ಷತ್ರ ನೋಡಲು ಚೆಂದ. ಅದರಲ್ಲೂ ಇದೀಗ ಸಿಡಿಯ ಬಹುದಾದ ಬೃಹನ್ ಆರ್ದ್ರಾ ನಕ್ಷತ್ರ , ರೆಡ್ ಸೂಪರ್ ಜೈಂಟ್. ಆಕಾಶವೀಕ್ಷಣೆಗೆ ಈ ಮಾರ್ಗಶೀರ್ಷಮಾಸ ಬಲು ಸೊಗಸು.
ಅದರೊಂದಿಗೆ ಇಂದಿನ ಆಕಾಶದ ಈ ಉಲ್ಕಾಪಾತದ ದುರುಸಿನ ಆಟವನ್ನು ನೋಡಿ ಆನಂದಿಸಿ.

ಡಾ. ಎ . ಪಿ . ಭಟ್, ಉಡುಪಿ.

Leave a Reply

Your email address will not be published. Required fields are marked *

error: Content is protected !!