ಉಡುಪಿ: ಪತ್ರಕರ್ತರ ವಾಹನಗಳಿಗೆ ಕ್ಯೂಆರ್ ಕೋಡ್ ಸಹಿತ ಮೀಡಿಯಾ ಸ್ಟಿಕ್ಕರ್ ಬಿಡುಗಡೆ

ಉಡುಪಿ: ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಯಾವ ರೀತಿ ಕೆಲಸ ಮಾಡುತ್ತಾದೆ ಎಂಬ ವಿಮರ್ಶೆ ಮಾಡುವ ಕೆಲಸವನ್ನು ನಾಲ್ಕನೇ ಅಂಗವಾಗಿರುವ ಮಾಧ್ಯಮರಂಗ ಮಾಡಬೇಕಾಗಿದೆ. ಹೀಗೆ ಪ್ರಜಾಪ್ರಭುತ್ವವನ್ನು ಕಾಪಾಡುವ ಬಹಳ ದೊಡ್ಡ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಜತ ಮಹೋತ್ಸವದ ಪ್ರಯುಕ್ತ ಮಂಗಳವಾರ ಉಡುಪಿ ಪತ್ರಿಕಾ ಭವನದಲ್ಲಿ ಸಂಘದ ಸದಸ್ಯರುಗಳ ವಾಹನಗಳಿಗೆ ಕ್ಯೂಆರ್ ಕೋಡ್ ಸಹಿತ ಮೀಡಿಯಾ ಸ್ಟಿಕ್ಕರ್ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಪತ್ರಕರ್ತರ ಹೆಸರಿನಲ್ಲಿ ಕಾರ್ಯಚರಿಸುವ ಕೆಲವು ನಕಲಿ ಪತ್ರಕರ್ತರು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದಾರೆ. ಇದೀಗ ಪತ್ರಕರ್ತರ ಸಂಘವು ಆಧುನಿಕ ತಂತ್ರಜ್ಞಾನ ಬಳಸಿ ವಾಹನಗಳ ಮಾಧ್ಯಮ ಸ್ಟಿಕ್ಕರ್‌ನಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ರೀತಿ ವ್ಯವಸ್ಥೆ ಮಾಡಿದರೆ ಪೊಲೀಸರಿಗೆ ಬಹಳ ಅನು ಕೂಲವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್, ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಉಡುಪಿ ಪತ್ರಿಕಾ ಭವನದ ಸಂಚಾಲಕ ಅಜಿತ್ ಆರಾಡಿ, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ರಜತ ಮಹೋತ್ಸವ ಸಮಿತಿಯ ಜತೆ ಕಾರ್ಯದರ್ಶಿ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!